ನವದೆಹಲಿ: 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ ತೀವ್ರ ನಿರಾಸೆಗೊಂಡು, ಕ್ರಿಕೆಟ್‌ನಿಂದಲೇ ನಿವೃತ್ತಿ ಪಡೆಯುವ ಬಗ್ಗೆ ಗಂಭೀರವಾಗಿ ಆಲೋಚಿಸಿದ್ದೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಬಹಿರಂಗಪಡಿಸಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಸೋಲಿನ ನಂತರ ತಾವು ಅನುಭವಿಸಿದ ಮಾನಸಿಕ ವೇದನೆಯನ್ನು ಅವರು ಬಿಚ್ಚಿಟ್ಟಿದ್ದಾರೆ. ಆ ಪಂದ್ಯದಲ್ಲಿ ಭಾರತ ನೀಡಿದ 240 ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ ಸುಲಭವಾಗಿ ಬೆನ್ನಟ್ಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.
ಆಟ ಆಡಲು ಮನಸ್ಸಿರಲಿಲ್ಲ
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೋಹಿತ್, “ಆ ಸೋಲಿನ ನಂತರ ನಾನು ಸಂಪೂರ್ಣವಾಗಿ ಕುಸಿದು ಹೋಗಿದ್ದೆ. ನನ್ನ ದೇಹದಲ್ಲಿ ಶಕ್ತಿಯೇ ಇಲ್ಲದಂತಾಗಿತ್ತು. ನಿಜ ಹೇಳಬೇಕೆಂದರೆ, ಒಂದು ಹಂತದಲ್ಲಿ ನನಗೆ ಇನ್ನು ಮುಂದೆ ಈ ಆಟವನ್ನು ಆಡಲು ಇಷ್ಟವಿಲ್ಲ ಎಂದೆನಿಸಿತ್ತು. ಏಕೆಂದರೆ, ಆ ವಿಶ್ವಕಪ್‌ಗಾಗಿ ನಾನು ನನ್ನ ಸರ್ವಸ್ವವನ್ನೂ ಧಾರೆಯೆರೆದಿದ್ದೆ. 2022ರಲ್ಲಿ ನಾಯಕತ್ವ ವಹಿಸಿಕೊಂಡಾಗಿನಿಂದಲೂ ನನ್ನ ಏಕೈಕ ಗುರಿ ವಿಶ್ವಕಪ್ ಗೆಲ್ಲುವುದೇ ಆಗಿತ್ತು. ಆದರೆ ಅದು ಸಾಧ್ಯವಾಗದಿದ್ದಾಗ, ನನ್ನಲ್ಲಿ ಇನ್ನು ಉಳಿದಿರುವುದೇನೂ ಇಲ್ಲ ಎಂಬ ಭಾವನೆ ಮೂಡಿತ್ತು,” ಎಂದು ಹೇಳಿದ್ದಾರೆ.
ಚೇತರಿಸಿಕೊಳ್ಳಲು ಎರಡು ತಿಂಗಳು ಬೇಕಾಯಿತು
ಸೋಲಿನ ಆಘಾತದಿಂದ ಹೊರಬಂದು, ಮತ್ತೆ ಚೇತರಿಸಿಕೊಳ್ಳಲು ತಮಗೆ ಸುಮಾರು ಎರಡು ತಿಂಗಳು ಬೇಕಾಯಿತು ಎಂದು ರೋಹಿತ್ ತಿಳಿಸಿದ್ದಾರೆ. “ನಾವು ಅಷ್ಟು ಕಷ್ಟಪಟ್ಟು ಶ್ರಮಿಸಿದರೂ ಫಲಿತಾಂಶ ಸಿಗದೇ ಇದ್ದಾಗ ಸಹಜವಾಗಿಯೇ ಇಂತಹ ಭಾವನೆಗಳು ಬರುತ್ತವೆ. ಆದರೆ ಜೀವನ ಅಲ್ಲಿಗೇ ಮುಗಿಯುವುದಿಲ್ಲ ಎಂಬುದನ್ನು ನಾನು ಅರಿತುಕೊಂಡೆ. ನಿರಾಶೆಯನ್ನು ಮೆಟ್ಟಿ ನಿಂತು, ಮತ್ತೆ ಹೊಸದಾಗಿ ಆರಂಭಿಸುವುದು ನನಗೆ ದೊಡ್ಡ ಪಾಠವಾಯಿತು,” ಎಂದು ಅವರು ಸ್ಮರಿಸಿದ್ದಾರೆ.
ಮುಂದಿನ ಗುರಿ ಟಿ20 ವಿಶ್ವಕಪ್ ಆಗಿತ್ತು
ಆ ಸಮಯದಲ್ಲಿ 2024ರ ಟಿ20 ವಿಶ್ವಕಪ್ ತಮ್ಮ ಮುಂದಿನ ಗುರಿಯಾಗಿತ್ತು ಎಂದು ರೋಹಿತ್ ಹೇಳಿದ್ದಾರೆ. “ನನ್ನ ಗಮನವನ್ನು ಅದರತ್ತ ಕೇಂದ್ರೀಕರಿಸಿದೆ. ನನಗೆ ಅತ್ಯಂತ ಪ್ರಿಯವಾದ ಆಟವನ್ನು ಅಷ್ಟು ಸುಲಭವಾಗಿ ಬಿಡಲು ಸಾಧ್ಯವಿಲ್ಲ ಎಂದು ನನ್ನ ಮನಸ್ಸಿಗೆ ನಾನೇ ಸಮಾಧಾನ ಮಾಡಿಕೊಂಡೆ. ನಿಧಾನವಾಗಿ ಮತ್ತೆ ಮೈದಾನಕ್ಕೆ ಇಳಿದು ಶ್ರಮಿಸಲು ಆರಂಭಿಸಿದೆ,” ಎಂದು ಅವರು ವಿವರಿಸಿದ್ದಾರೆ.
ಅವರ ಈ ನಿರ್ಧಾರ ಫಲ ನೀಡಿತು. 2024ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲೇ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಆ ಗೆಲುವಿನ ನಂತರ ಅವರು ಟಿ20 ಮಾದರಿಗೆ ವಿದಾಯ ಘೋಷಿಸಿದರು.
ಇದನ್ನೂ ಓದಿ: ಇಬ್ಬರ ಕೈಗಳಲ್ಲಿ ವಿಶ್ವಕಪ್ ಕಿರೀಟ : ರೇಣುಕಾ ಸಿಂಗ್‌ಗೆ ಲಿಯೋನೆಲ್ ಮೆಸ್ಸಿ ಭೇಟಿ ಸ್ಮರಣೀಯ ಕ್ಷಣ!



















