ಇಂದೋರ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ನಿರ್ಣಾಯಕ ಕದನಕ್ಕೆ ಇಂದೋರ್ನ ಹೋಲ್ಕರ್ ಕ್ರೀಡಾಂಗಣ ಸಜ್ಜಾಗಿದೆ. ಈ ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ, ಮಾಜಿ ಕ್ರಿಕೆಟಿಗ ಹಾಗೂ ಜನಪ್ರಿಯ ಕಾಮೆಂಟೇಟರ್ ಆಕಾಶ್ ಚೋಪ್ರಾ ಅವರು ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರಿಗೆ ವಿಶೇಷ ಸವಾಲೊಂದನ್ನು ಹಾಕಿದ್ದಾರೆ.
ಸರಣಿಯಲ್ಲಿ ಇದುವರೆಗೂ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿರುವ ರೋಹಿತ್, ನಿರ್ಣಾಯಕ ಪಂದ್ಯದಲ್ಲಿ ಶತಕ ಸಿಡಿಸಬೇಕು ಎಂದು ಚೋಪ್ರಾ ಆಗ್ರಹಿಸಿದ್ದಾರೆ. ಸರಣಿ ಸದ್ಯ 1-1 ಸಮಬಲದಲ್ಲಿದ್ದು, ವಡೋದರಾದಲ್ಲಿ ಭಾರತ ಗೆದ್ದಿದ್ದರೆ, ರಾಜ್ಕೋಟ್ನಲ್ಲಿ ಕಿವೀಸ್ ತಿರುಗೇಟು ನೀಡಿತ್ತು. ಹೀಗಾಗಿ ಇಂದೋರ್ ಪಂದ್ಯ ಫೈನಲ್ ಸ್ವರೂಪ ಪಡೆದುಕೊಂಡಿದೆ.
‘ಆರು ತಿಂಗಳು ವಿಶ್ರಾಂತಿ, ಹೀಗಾಗಿ ಶತಕ ಬೇಕೇಬೇಕು’
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ, ರೋಹಿತ್ ಶರ್ಮಾ ಅವರ ಪ್ರದರ್ಶನದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. “ಇಂದೋರ್ ಮೈದಾನ ಚಿಕ್ಕದಾಗಿದೆ ಮತ್ತು ಪಿಚ್ ಬ್ಯಾಟಿಂಗ್ಗೆ ಹೇಳಿ ಮಾಡಿಸಿದಂತಿದೆ. ಈ ಪಂದ್ಯದ ನಂತರ ಮುಂದಿನ ಆರು ತಿಂಗಳ ಕಾಲ ಟೀಮ್ ಇಂಡಿಯಾ ಯಾವುದೇ ಏಕದಿನ ಪಂದ್ಯಗಳನ್ನು ಆಡುವುದಿಲ್ಲ. ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯವರೆಗೆ ರೋಹಿತ್ ಮತ್ತು ಕೊಹ್ಲಿ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ, ರೋಹಿತ್ ಈ ಪಂದ್ಯದಲ್ಲಿ ಶತಕ ಬಾರಿಸಿ ಅಭಿಮಾನಿಗಳಿಗೆ ಸಿಹಿ ನೆನಪನ್ನು ನೀಡಬೇಕು,” ಎಂದು ಚೋಪ್ರಾ ಹೇಳಿದ್ದಾರೆ.
ಐಪಿಎಲ್ಗೂ ಮುನ್ನ ಅಂತಿಮ ಅಂತಾರಾಷ್ಟ್ರೀಯ ಪಂದ್ಯ
ಟೆಸ್ಟ್ ಮತ್ತು ಟಿ20 ಕ್ರಿಕೆಟ್ಗೆ ವಿದಾಯ ಹೇಳಿರುವ ರೋಹಿತ್ ಮತ್ತು ಕೊಹ್ಲಿ, ಕೇವಲ ಏಕದಿನ ಮಾದರಿಯಲ್ಲಿ ಮಾತ್ರ ಮುಂದುವರಿಯುತ್ತಿದ್ದಾರೆ. ಮುಂಬರುವ ಐಪಿಎಲ್ 2026ರಲ್ಲಿ ರೋಹಿತ್ ಮುಂಬೈ ಇಂಡಿಯನ್ಸ್ ಪರ ಹಾಗೂ ಕೊಹ್ಲಿ ಆರ್ಸಿಬಿ ಪರ ಕಣಕ್ಕಿಳಿಯಲಿದ್ದಾರೆ. ಅದಕ್ಕೂ ಮುನ್ನ ನಡೆಯುತ್ತಿರುವ ಈ ಅಂತಿಮ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಬ್ಬರೂ ಹಿರಿಯ ಆಟಗಾರರು ಅಬ್ಬರಿಸಬೇಕು ಎಂಬುದು ಚೋಪ್ರಾ ಅವರ ಅಭಿಪ್ರಾಯವಾಗಿದೆ.
ಸರಣಿಯಲ್ಲಿ ರೋಹಿತ್ ಶರ್ಮಾ ಎರಡು ಇನ್ನಿಂಗ್ಸ್ಗಳಿಂದ ಕೇವಲ 50 ರನ್ ಗಳಿಸಿದ್ದರೆ (ಸರಾಸರಿ 25), ವಿರಾಟ್ ಕೊಹ್ಲಿ ಅಮೋಘ ಫಾರ್ಮ್ನಲ್ಲಿದ್ದು, ವಡೋದರಾದಲ್ಲಿ 93 ರನ್ ಸೇರಿದಂತೆ ಒಟ್ಟು 116 ರನ್ (ಸರಾಸರಿ 58) ಕಲೆಹಾಕಿದ್ದಾರೆ.
ಕೆ.ಎಲ್ ರಾಹುಲ್ ಸ್ಥಾನ ಬದಲಿಸಬೇಡಿ: ಚೋಪ್ರಾ ಸಲಹೆ
ತಂಡದ ಬ್ಯಾಟಿಂಗ್ ಕ್ರಮಾಂಕದ ಬಗ್ಗೆಯೂ ಚೋಪ್ರಾ ಸಲಹೆ ನೀಡಿದ್ದಾರೆ. “ರಾಜ್ಕೋಟ್ನಲ್ಲಿ ಶತಕ ಸಿಡಿಸಿದ ಕೆ.ಎಲ್ ರಾಹುಲ್ ಅವರನ್ನು 5ನೇ ಕ್ರಮಾಂಕದಲ್ಲೇ ಮುಂದುವರಿಸಬೇಕು. ನಿತೀಶ್ ಕುಮಾರ್ ರೆಡ್ಡಿ 6ನೇ ಕ್ರಮಾಂಕದಲ್ಲಿ ಆಡಲಿ. ತಂಡದಲ್ಲಿ ಅನಗತ್ಯ ಪ್ರಯೋಗಗಳನ್ನು ಮಾಡಬಾರದು,” ಎಂದು ಅವರು ಎಚ್ಚರಿಸಿದ್ದಾರೆ.
ಅಲ್ಲದೆ, ರವೀಂದ್ರ ಜಡೇಜಾ ಅವರ ಪ್ರದರ್ಶನದ ಬಗ್ಗೆಯೂ ಚೋಪ್ರಾ ಕಳವಳ ವ್ಯಕ್ತಪಡಿಸಿದ್ದು, “ಜಡೇಜಾ ಅವರಿಗೆ ಸಮಯ ಮೀರುತ್ತಿದೆ. ಅವರು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರರಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಿದೆ,” ಎಂದು ಹೇಳಿದ್ದಾರೆ.
ಭಾನುವಾರ (ಜ.18) ನಡೆಯಲಿರುವ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸದೇ ‘ಹಿಟ್ಮ್ಯಾನ್’ ಅವತಾರ ತಾಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ : ಟಿ20 ವಿಶ್ವಕಪ್ನಿಂದ ಹೊರಬಿದ್ದರೂ ಎದೆಗುಂದದ ಸಿರಾಜ್ | ಹೈದರಾಬಾದ್ ವೇಗಿ ನೀಡಿದ ಸ್ಪಷ್ಟನೆ ಹೀಗಿದೆ..



















