ರಾಂಚಿ: ವಿಶ್ವ ಕ್ರಿಕೆಟ್‌ನಲ್ಲಿ ‘ಹಿಟ್‌ಮ್ಯಾನ್‘ ಎಂದೇ ಖ್ಯಾತರಾಗಿರುವ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸಿಕ್ಸರ್‌ಗಳ ಮೂಲಕವೇ ಅಭಿಮಾನಿಗಳನ್ನು ರಂಜಿಸುವ ರೋಹಿತ್, ಇದೀಗ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.
ಭಾನುವಾರ ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಈ ಸಾಧನೆ ಮಾಡಿದರು. ಈ ಮೂಲಕ ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಅವರ ದೀರ್ಘಕಾಲದ ದಾಖಲೆಯನ್ನು ಮುರಿದು ಹಾಕಿದ್ದಾರೆ.

ಅಫ್ರಿದಿ ದಾಖಲೆ ಬ್ರೇಕ್!
ಈ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ವಿಶ್ವದಾಖಲೆ ಮುರಿಯಲು ಕೇವಲ 3 ಸಿಕ್ಸರ್‌ಗಳ ಅಂತರದಲ್ಲಿದ್ದರು. ಶಾಹಿದ್ ಅಫ್ರಿದಿ 351 ಸಿಕ್ಸರ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರು. ಆದರೆ ರಾಂಚಿಯಲ್ಲಿ ಅಬ್ಬರಿಸಿದ ರೋಹಿತ್, 15ನೇ ಓವರ್‌ನಲ್ಲಿ ಸತತ ಎರಡು ಸಿಕ್ಸರ್ ಸಿಡಿಸಿ ಅಫ್ರಿದಿ ದಾಖಲೆಯನ್ನು ಸರಿಗಟ್ಟಿದರು. ಬಳಿಕ ಮಾರ್ಕೊ ಜಾನ್ಸನ್ ಬೌಲಿಂಗ್‌ನಲ್ಲಿ ತಮ್ಮ ಟ್ರೇಡ್‌ಮಾರ್ಕ್ ‘ಪುಲ್ ಶಾಟ್’ ಮೂಲಕ ಚೆಂಡನ್ನು ಗ್ಯಾಲರಿಗೆ ಅಟ್ಟುವ ಮೂಲಕ ಸಿಕ್ಸರ್‌ಗಳ ಸರದಾರನಾಗಿ ಹೊರಹೊಮ್ಮಿದರು .
ಟಾಪ್-5 ಸಿಕ್ಸರ್ ಸರದಾರರು (ODI):
- ರೋಹಿತ್ ಶರ್ಮಾ (ಭಾರತ) – 352*
- ಶಾಹಿದ್ ಅಫ್ರಿದಿ (ಪಾಕಿಸ್ತಾನ) – 351
- ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) – 331
- ಸನತ್ ಜಯಸೂರ್ಯ (ಶ್ರೀಲಂಕಾ) – 270
- ಎಂ.ಎಸ್. ಧೋನಿ (ಭಾರತ) – 229
ಸಿಕ್ಸರ್‌ಗಳ ಶತಕವೀರ
ಕೇವಲ ಏಕದಿನ ಮಾತ್ರವಲ್ಲ, ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಲ್ಲೂ ಸಿಕ್ಸರ್ ಸಿಡಿಸುವುದರಲ್ಲಿ ಎತ್ತಿದ ಕೈ. ಟಿ20 ಕ್ರಿಕೆಟ್‌ನಲ್ಲಿ ಈಗಾಗಲೇ 205 ಸಿಕ್ಸರ್ ಸಿಡಿಸಿರುವ ಅವರು, ಟೆಸ್ಟ್‌ನಲ್ಲೂ 88 ಸಿಕ್ಸರ್ ಬಾರಿಸಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಸಿಕ್ಸರ್‌ಗಳ ಸಂಖ್ಯೆ 642ಕ್ಕೆ ಏರಿಕೆಯಾಗಿದೆ.
ಅರ್ಧಶತಕದ ಕಾಣಿಕೆ
ದಾಖಲೆಯ ಜೊತೆಗೆ ತಂಡಕ್ಕೂ ಉತ್ತಮ ಆರಂಭ ಒದಗಿಸಿದ ರೋಹಿತ್, 51 ಎಸೆತಗಳಲ್ಲಿ 57 ರನ್ ಗಳಿಸಿದರು. ಇದರಲ್ಲಿ 5 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳಿದ್ದವು. ವಿರಾಟ್ ಕೊಹ್ಲಿ ಜೊತೆಗೂಡಿ 2ನೇ ವಿಕೆಟ್‌ಗೆ 136 ರನ್‌ಗಳ ಬೃಹತ್ ಜೊತೆಯಾಟ ಆಡುವ ಮೂಲಕ ತಂಡದ ಮೊತ್ತ ಹೆಚ್ಚಿಸಲು ನೆರವಾದರು. ಅಂತಿಮವಾಗಿ ಮಾರ್ಕೊ ಜಾನ್ಸನ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.
ಇದನ್ನೂ ಓದಿ: 52ನೇ ಏಕದಿನ ಶತಕ ಬಾರಿಸಿದ ವಿರಾಟ್ ಕೊಹ್ಲಿ.. ಆಫ್ರಿಕಾ ಬೌಲರ್ಗಳ ಬೆಂಡೆತ್ತಿದ ಕ್ರಿಕೆಟ್ ದೊರೆ



















