ಅಡಿಲೇಡ್ : ಆಸೀಸ್ ವಿರುದ್ಧ ನಡೆಯುತ್ತಿರುವ 2ನೇ ಒಡಿಐ ಪಂದ್ಯದಲ್ಲಿ ಶುಭ್ಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ದೊಡ್ಡ ಮೊತ್ತಕ್ಕೆ ಆಲೌಟ್ ಆಗಿದೆ. ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಅರ್ಧಶತಕದ ನೆರವಿನಿಂದ 265 ರನ್ಗಳ ಟಾರ್ಗೆಟ್ ಅನ್ನು ಆಸ್ಟ್ರೇಲಿಯಾಗೆ ನೀಡಿದೆ.
ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಆಸೀಸ್ ನಾಯಕ ಮಿಚೆಲ್ ಮಾರ್ಷ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ್ದರಿಂದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡಿತು. ಆರಂಭದಲ್ಲೇ ಟೀಮ್ ಇಂಡಿಯಾ ಕ್ಯಾಪ್ಟನ್ ಗಿಲ್ ಔಟ್ ಆಗಿ ನಿರಾಸೆ ಮೂಡಿಸಿದರು. ಇವರ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ಡಕೌಟ್ ಆಗಿ ಈ ಸರಣಿಯಲ್ಲಿ ಎರಡನೇ ಬಾರಿ ಸೊನ್ನೆ ಸುತ್ತಿದರು.
ಆದರೆ ಇನ್ನೊಂದೆಡೆ ಬಲಿಷ್ಠ ಬ್ಯಾಟಿಂಗ್ ಪ್ರದರ್ಶಿಸಿದ ಓಪನರ್ ರೋಹಿತ್ ಶರ್ಮಾ ಆಸಿಸ್ ಬೌಲರ್ಗಳಿಗೆ ಬೆವರಿಳಿಸಿದರು. 74 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ನಿಂದ ಫಿಫ್ಟಿ ಸಿಡಿಸಿದರು. ಇದು ರೋಹಿತ್ ಅವರ 2015ರ ನಂತರದ ಅತ್ಯಂತ ನಿಧಾನವಾದ ಅರ್ಧಶತಕವಾಗಿದೆ. ರೋಹಿತ್ ವೃತ್ತಿ ಜೀವನದ 59ನೇ ಅರ್ಧಶತಕವಾಗಿದೆ. 97 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ಗಳಿಂದ 73 ರನ್ ಗಳಿಸಿ ಆಡುವಾಗ ರೋಹಿತ್, ಹ್ಯಾಜಲ್ವುಡ್ಗೆ ಕ್ಯಾಚ್ ಕೊಟ್ಟು ಔಟಾದರು.
ಮತ್ತೊಂದೆಡೆ ಶ್ರೇಯಸ್ ಅಯ್ಯರ್ 67 ಬಾಲ್ಗಳನ್ನು ಎದುರಿಸಿ 5 ಬೌಂಡರಿಗಳಿಂದ ಅರ್ಧಶತಕ ಬಾರಿಸಿದ್ದು, ಇದು ಅವರ 23ನೇ ಹಾಫ್ಸೆಂಚುರಿ ಆಗಿದೆ. ಈ ಪಂದ್ಯದಲ್ಲಿ ಅಯ್ಯರ್ ಒಟ್ಟು 61 ರನ್ ಗಳಿಸಿ ಔಟ್ ಆದರು. ಆ ಬಳಿಕ ಅಕ್ಷರ್ ಪಟೇಲ್ ಅತ್ಯುತ್ತಮ ಆಲ್ರೌಂಡರ್ ಬ್ಯಾಟಿಂಗ್ ಪ್ರದರ್ಶಿಸಿ 41 ಎಸೆತದಲ್ಲಿ 5 ಬೌಂಡರಿಗಳಿಂದ 44 ರನ್ ಗಳಿಸಿದರು. ಇನ್ನುಳಿದಂತೆ ಕೆ.ಎಲ್ ರಾಹುಲ್ 11, ಸುಂದರ್ 12, ನಿತೀಶ್ ಕುಮಾರ್ 8, ಅರ್ಷ್ದೀಪ್ ಸಿಂಗ್ 13, ಹರ್ಷಿತಾ ರಾಣಾ ಅಜೇಯ 24 ರನ್, ಈ ಎಲ್ಲ ಬ್ಯಾಟ್ಸ್ಮನ್ಗಳ ನೆರವಿನಿಂದ ಟೀಮ್ ಇಂಡಿಯಾ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 265 ರನ್ಗಳ ಬೃಹತ್ ಟಾರ್ಗೆಟ್ ಅನ್ನು ಆಸ್ಟ್ರೇಲಿಯಾಗೆ ನೀಡಿದೆ.



















