ಬೆಂಗಳೂರು: ರಾಜ್ಯದಲ್ಲಿ ರಸ್ತೆ ಗುಂಡಿ ವಿಚಾರ ಭಾರೀ ಸದ್ದು ಮಾಡುತ್ತಿದೆ. ಉದ್ಯಮಿಗಳು ಮತ್ತು ನಾಗರೀಕರು ರಸ್ತೆ ಗುಂಡಿ ವಿಚಾರಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ರಾಜ್ಯಾದ್ಯಂತ ಇಂದು (ಬುಧವಾರ) ಬಿಜೆಪಿ ನಾಯಕರು ಪ್ರತಿಭಟನೆ ಅಭಿಯಾನ ಆರಂಭಿಸಿದ್ದಾರೆ. ಸ್ವತಃ ಬಿಜೆಪಿ ನಾಯಕರೇ ಗುಂಡಿಯನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದು, ಸರ್ಕಾರಕ್ಕೆ ಇದೊಂದು ರೀತಿ ಮುಜುಗರವಾಗುವಂತಿದೆ.

ಈಗಾಗಲೇ ರಸ್ತೆ ಗುಂಡಿ ಮುಂಚುವಂತೆ ರಾಜ್ಯಾದ್ಯಂತ ಅಭಿಯಾನ ಆರಂಭಿಸಿದ್ದು, ಹಲವಡೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿ ನಾಯಕರು ರಸ್ತೆ ತಡೆದು ಗುಂಡಿ ಮುಚ್ಚುವ ಹೋರಾಟಕ್ಕೆ ಮುಂದಾಗಿದ್ದಾರೆ. ಯಾದಗಿರಿಯಲ್ಲೂ ಬಿಜೆಪಿಯಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಯಾದಗಿರಿ ಮತಕ್ಷೇತ್ರದ ದೋರನಹಳ್ಳಿ ಗ್ರಾಮದ ಬಳಿ ಬಿಜೆಪಿ ಮುಖಂಡ ಮಹೇಶ್ ರೆಡ್ಡಿ ಮುದ್ನಾಳ್ ನೇತೃತ್ವದಲ್ಲಿ ರಸ್ತೆ ತಡೆದು ರಸ್ತೆಯಲ್ಲೇ ಧರಣಿ ಕುಳಿತ ಪ್ರತಿಭಟನಾಕಾರರು ರಸ್ತೆ ಗುಂಡಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಭಾವಚಿತ್ರವಿಟ್ಟ ಬ್ಯಾನರ್ ಹಿಡಿದು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಇತ್ತ, ಹಾವೇರಿಯಲ್ಲೂ ರಸ್ತೆ ಗುಂಡಿಗಳನ್ನೂ ಮುಚ್ಚದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸಲಾಯಿತು. ಹಾವೇರಿಯ ಜಿ.ಎಚ್ ಪಾಟೀಲ್ ಸರ್ಕಲ್‌ನಲ್ಲಿ ಸ್ವಯಂ ಪ್ರೇರಿತರಾಗಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ಸ್ಥಳೀಯ ಕಾಂಗ್ರೆಸ್ ಶಾಸಕರ ವಿರುದ್ಧವು ಬಿಜೆಪಿ ಕಾರ್ಯಕರ್ತರು ಕಿಡಿಕಾರಿದರು.
