ಐಪಿಎಲ್ ಫ್ರಾಂಚೈಸಿಗಳು ತಮ್ಮ ರಿಟೆನ್ಷನ್ ಪಟ್ಟಿಯನ್ನು ಬಿಡುಗಡೆ ಮಾಡಲು ಇನ್ನೊಂದು ದಿನ ಬಾಕಿ ಇರುವಾಗಲೇ ಆರ್ ಸಿಬಿ ತನ್ನ ಅಭಿಮಾನಿಗಳ ತಲೆಗೆ ಕೆಲಸ ಕೊಟ್ಟಿದೆ.
ಅಕ್ಟೋಬರ್ 31 ರ 5 ಗಂಟೆಯೊಳಗೆ ಎಲ್ಲ ಐಪಿಎಲ್ ಫ್ರಾಂಚೈಸಿಗಳು ತಮ್ಮ ತಮ್ಮ ತಂಡಗಳಲ್ಲಿ ಉಳಿಸಿಕೊಂಡ ಹಾಗೂ ಆರ್ಟಿಎಮ್ ಆಯ್ಕೆಯಾಗಿರುವ ಆಟಗಾರರ ಪಟ್ಟಿಯನ್ನು ನೀಡಬೇಕು. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ರಿಟೈನ್ ಪಟ್ಟಿ ಸಿದ್ಧಪಡಿಸುವ ಕಾರ್ಯದಲ್ಲಿವೆ. ಈ ಪಟ್ಟಿ ನೀಡಲು ಒಂದು ದಿನ ಬಾಕಿ ಇರುವಾಗಲೆ ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ವಿಭಿನ್ನ ಪೋಸ್ಟ್ವೊಂದನ್ನು ಹಂಚಿಕೊಂಡು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದೆ.
ಈ ಬಾರಿ ಆರ್ಸಿಬಿ ನಾಲ್ವರು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಮುಂದಾಗಿದೆ. ವಿರಾಟ್ ಕೊಹ್ಲಿ ಆಯ್ಕೆ ಖಚಿತವಾಗಿದೆ. ಅಲ್ಲದೇ, ಎರಡನೇ ಆಯ್ಕೆಯಾಗಿ ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಳ್ಳಲು ತಂಡ ಮುಂದಾಗಿದೆ. ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿ ರಜತ್ ಪಾಟಿದರ್ ಹಾಗೂ ವಿಲ್ ಜಾಕ್ಸ್ ಇರಬಹುದು ಎಂಬುವುದು ಇದರಿಂದ ಗೊತ್ತಾಗುತ್ತಿದೆ. ಅನ್ಕ್ಯಾಪ್ಡ್ ಆಟಗಾರನಾಗಿ ಯಶ್ ದಯಾಳ್ ತಂಡದಲ್ಲಿ ಉಳಿಯಬಹುದು ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ.
ಈಗಾಗಲೇ ಇದಕ್ಕಾಗಿ ಫಜಲ್ ಬಿಡುಗಡೆ ಮಾಡಿದೆ. ಪಝಲ್ ಗೇಮ್ನಲ್ಲಿ ತಂಡ ಉಳಿಸಿಕೊಳ್ಳಬಹುದಾದ ಆಟಗಾರರ ಹೆಸರನ್ನು ಅಡಗಿಟ್ಟಿಸಿದೆ. ಅದರಲ್ಲಿ ಹುಡುಕಿದಾಗ ಒಟ್ಟಾರೆ 8 ಆಟಗಾರರ ಹೆಸರು ಪತ್ತೆಯಾಗಿದೆ. ಆದರೆ ಫ್ರಾಂಚೈಸಿಯೊಂದು ತಂಡದಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರರ ಸಂಖ್ಯೆ 6 ಮಾತ್ರ. ಹೀಗಾಗಿ ಯಾರನ್ನು ಉಳಿಸಿಕೊಳ್ಳಬಹುದು ಎಂಬ ಚಿಂತೆ ಈಗ ಆಟಗಾರರನ್ನು ಕಾಡುತ್ತಿದೆ.
ಪ್ರಸ್ತುತ ಆರ್ಸಿಬಿ ಹಂಚಿಕೊಂಡಿರುವ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ವಿಲ್ ಜಾಕ್ಸ್, ಗ್ಲೆನ್ ಮ್ಯಾಕ್ಸ್ವೆಲ್, ರಜತ್ ಪಾಟಿದಾರ್, ಅನುಜ್ ರಾವತ್, ಯಶ್ ದಯಾಳ್, ಫಾಫ್ ಡು ಪ್ಲೆಸಿಸ್ ಇದ್ದಾರೆ.