ಕ್ರೀಡಾ ಸುದ್ದಿ: ದೇಶಿಯ ಕ್ರಿಕೆಟ್ ಕ್ರಿಕೆಟ್ ಪ್ರತಿಭೆಗಳ ಪ್ರೋತ್ಸಾಹ ಹಾಗೂ ಪ್ರದರ್ಶನ ಸುಧಾರಣೆಗೆ ಅತ್ಯಂತ ಸೂಕ್ತ ವೇದಿಕೆ ಎಂಬುದು ಗೊತ್ತಿರುವ ವಿಚಾರ. ಅದರಲ್ಲೂ ರಣಜಿ ಟ್ರೋಫಿಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಆದರೆ, ಭಾರತ ತಂಡಕ್ಕೆ ಸೇರಿದ ಬಳಿಕ ಕೆಲವು ಸ್ಟಾರ್ ಆಟಗಾರರು ರಣಜಿಯಲ್ಲಿ ಪಾಲ್ಗೊಳ್ಳುವುದಿಲ್ಲ. ಕೆಲಸದ ಒತ್ತಡದ ನಿರ್ವಹಣೆ ಮೊದಲ ಕಾರಣವಾದರೆ, ಸ್ಟಾರ್‌ಗಿರಿ ಇನ್ನೊಂದು ತಡೆ. ಈ ಬಗ್ಗೆ ಟೀಕೆಗಳು ಹಿಂದಿನಿಂದಲೂ ಬರುತ್ತಿವೆ. ಆದರೆ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಹೀನಾಯವಾಗಿ ಸೋತ ಬಳಿಕ ಈ ಬಗ್ಗೆ ಜೋರು ಚರ್ಚೆಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಆಟಗಾರರು ಈಗ ರಣಜಿ ಕಡೆ ಮುಖ ಮಾಡುತ್ತಿದ್ದಾರೆ.
ದೇಶಿಯ ಕ್ರಿಕೆಟ್‌ನಲ್ಲಿ ಆಡಿ ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವಂತೆ ಹಿರಿಯ ಆಟಗಾರರು ನೀಡಿದ್ದರು. ಅದರಂತೆ ನಾಯಕ ರೋಹಿತ್ ಶರ್ಮಾ ಮುಂಬೈ ಕ್ರಿಕೆಟ್ ತಂಡದೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ, ರಣಜಿ ಪಂದ್ಯ ಆಡುವ ಕುರಿತು ಇನ್ನೂ ಅವರು ಸ್ಪಷ್ಟಪಡಿಸಿಲ್ಲ. ಈ ನಡುವೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ರಿಷಭ್ ಪಂತ್ ರಣಜಿ ಟ್ರೋಫಿ ಪಂದ್ಯಕ್ಕೆ ಲಭ್ಯರಾಗಿದ್ದಾರೆ. ರಾಜ್‌ಕೋಟ್‌ಲ್ಲಿ ನಡೆಯಲಿರುವ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ತಂಡದ ಪರ ಕಣಕ್ಕಿಳಿಯುವುದಾಗಿ ಪ್ರಕಟಿಸಿದ್ದಾರೆ. .
ವಿರಾಟ್ ಕೊಹ್ಲಿ ಮುಂಬರುವ ಪಂದ್ಯದಲ್ಲಿ ಆಡುವ ಬಗ್ಗೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಗೆ (ಡಿಡಿಸಿಎ) ಏನನ್ನೂ ತಿಳಿಸಿಲ್ಲ.ಅವರು ಹಲವಾರು ವರ್ಷಗಳಿಂದ ಆಡುತ್ತಿಲ್ಲ. ಹೀಗಾಗಿ ಅವರ ನಡೆ ಇನ್ನು ಅಸ್ಪಷ್ಟ. ಜನವರಿ 23ರಂದು ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಪರ ಆಡಲು ರಾಜ್‌ಕೋಟ್‌ಗೆ ಪಂತ್ ಪ್ರಯಾಣಿಸಲಿದ್ದಾರೆ ಎಂದು ಡಿಡಿಸಿಎ ಕಾರ್ಯದರ್ಶಿ ಅಶೋಕ್ ಶರ್ಮಾ ಖಚಿತಪಡಿಸಿದ್ದಾರೆ.
“ಹೌದು, ರಿಷಭ್ ಪಂತ್ ಆಡಲು ಲಭ್ಯವಿದ್ದಾರೆ. ಅವರು ತಂಡದೊಂದಿಗೆ ರಾಜ್‌ಕೋಟ್‌ಗೆ ಪ್ರಯಾಣಿಸಲಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ದೀರ್ಘ ಅವಧಿ ಬಳಿಕ ರಣಜಿಯಲ್ಲಿ
2017-18ರ ಫೈನಲ್‌ನಲ್ಲಿ ವಿದರ್ಭ ವಿರುದ್ಧ ರಿಷಭ್ ಪಂತ್ ಕೊನೆಯ ಬಾರಿ ರಣಜಿ ಟ್ರೋಫಿ ಆಡಿದ್ದರು. ಇದೀಗ 7 ವರ್ಷಗಳ ಬಳಿಕ ಅವರು ಮತ್ತೆ ರಣಜಿ ಪಂದ್ಯ ಆಡುತ್ತಿದ್ದಾರೆ.
ವಿರಾಟ್ ಕೊಹ್ಲಿ ರಣಜಿ ಪಂದ್ಯದಲ್ಲಿ ಆಡುವ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ. ಕೊಹ್ಲಿ ಕೊನೆಯ ಬಾರಿಗೆ ರಣಜಿ ಟ್ರೋಫಿ ಆಡಿದ್ದು 2012ರಲ್ಲಿ. ವಿರಾಟ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಿದ 9 ಇನ್ನಿಂಗ್ಸ್‌ಗಳಲ್ಲಿ ಕೇವಲ 190 ರನ್ ಗಳಿಸಿದ್ದರು. ಪರ್ತ್‌ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ಶತಕ ಬಾರಿಸಿದ್ದ ಕೊಹ್ಲಿ, ಆಫ್-ಸ್ಟಂಪ್ ಹೊರಗಿನ ಎಸೆತಗಳನ್ನು ಎದುರಿಸುವ ಸಂದರ್ಭದಲ್ಲಿ ಔಟಾಗುತ್ತಿದ್ದಾರೆ.
ಗಿಲ್ ಮತ್ತು ಜೈಸ್ವಾಲ್ ಆಡುತ್ತಾರೆ
ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಕ್ರಮವಾಗಿ ಪಂಜಾಬ್ ಮತ್ತು ಮುಂಬೈ ತಂಡದ ಪರ ರಣಜಿ ಪಂದ್ಯ ಆಡಲು ಲಭ್ಯವಿದ್ದಾರೆ. ಮುಂಬೈ ತಂಡ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಸೆಣಸಲಿದ್ದು, ಪಂಜಾಬ್ ತಂಡ ಕರ್ನಾಟಕ ವಿರುದ್ಧ ಸೆಣಸಲಿದೆ.
ಟೀಮ್ ಇಂಡಿಯಾ ನಾಯಕನ ನಡೆ ಬಗ್ಗೆ ಸಿಗದ ಸ್ಪಷ್ಟನೆ
ಮುಂಬೈ ಟೀಮ್ ಸದಸ್ಯರೊಂದಿಗೆ ರೋಹಿತ್ ಶರ್ಮಾ ತರಬೇತಿ ಪಡೆಯುತ್ತಿರುವುದು ಕಂಡುಬಂದಿದೆ. ಆದರೆ, ಅವರು ಮುಂಬೈನಲ್ಲಿ ಆಡುವ ಕುರಿತು ತಿಳಿದು ಬಂದಿಲ್ಲ. ಈ ಹಿಂದೆ, ಪ್ರತಿಯೊಬ್ಬ ಆಟಗಾರ ಕೂಡಾ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ರಾಜ್ಯ ತಂಡಗಳನ್ನು ಪ್ರತಿನಿಧಿಸುವಂತೆ ಬಿಸಿಸಿಐ ಕೇಳಿಕೊಂಡಿತ್ತು. ಒಂದು ವೇಳೆ ಹಾಜರಾಗಲು ಸಾಧ್ಯವಾಗದಿದ್ದರೆ ಫಿಸಿಯೋದಿಂದ ವರದಿ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರಿಂದ ಅನುಮತಿ ಪಡೆಯುವಂತೆ ಮಂಡಳಿ ಹೇಳಿದೆ.