ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಗಾಯಗೊಂಡಿದ್ದ ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್, ದೇಶೀಯ ಕ್ರಿಕೆಟ್ ಮೂಲಕ ಸ್ಪರ್ಧಾತ್ಮಕ ಆಟಕ್ಕೆ ಮರಳಲು ಸಜ್ಜಾಗಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿರುವ ಪಂತ್, ಅಕ್ಟೋಬರ್ 25 ರಿಂದ ಆರಂಭವಾಗಲಿರುವ ರಣಜಿ ಟ್ರೋಫಿಯಲ್ಲಿ ಆಡುವ ನಿರೀಕ್ಷೆಯಿದೆ.
ಜುಲೈ 24 ರಂದು ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ರಿವರ್ಸ್ ಸ್ವೀಪ್ ಮಾಡಲು ಯತ್ನಿಸಿದಾಗ ಪಂತ್ ಅವರ ಎಡಗಾಲಿನ ಮೂಳೆ ಮುರಿದಿತ್ತು. ಈ ಗಂಭೀರ ಗಾಯದ ನಂತರ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿದ್ದರು. ಸದ್ಯ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪುನಶ್ಚೇತನ ಪ್ರಕ್ರಿಯೆಯಲ್ಲಿದ್ದು, ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಫಿಟ್‌ನೆಸ್ ಪ್ರಗತಿಯನ್ನು ಬಿಸಿಸಿಐ ವೈದ್ಯಕೀಯ ತಂಡವು ಸೂಕ್ಷ್ಮವಾಗಿ ಗಮನಿಸುತ್ತಿದೆ.
“ಫಿಟ್‌ನೆಸ್ ಪರೀಕ್ಷೆ ಮತ್ತು ಬಿಸಿಸಿಐ ನಿಲುವು”
ಬಿಸಿಸಿಐ ಅಧಿಕಾರಿಯೊಬ್ಬರ ಪ್ರಕಾರ, ರಿಷಭ್ ಪಂತ್ ಅಕ್ಟೋಬರ್ 10 ರೊಳಗೆ ಸಂಪೂರ್ಣ ಫಿಟ್ ಆಗುವ ನಿರೀಕ್ಷೆಯಿದೆ ಮತ್ತು ಈ ವಾರ ಅವರ ಅಂತಿಮ ಫಿಟ್‌ನೆಸ್ ಮೌಲ್ಯಮಾಪನ ನಡೆಯಲಿದೆ. “ಪಂತ್ ಬಹಳ ದಿನಗಳಿಂದ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೂ, ಬಿಸಿಸಿಐ ವೈದ್ಯಕೀಯ ತಂಡವು ಅವರ ವಿಷಯದಲ್ಲಿ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧವಿಲ್ಲ. ಸಂಪೂರ್ಣ ಫಿಟ್ ಎಂದು ಖಚಿತವಾದ ನಂತರವೇ ಅವರಿಗೆ ಆಡಲು ಅನುಮತಿ ನೀಡಲಾಗುವುದು” ಎಂದು ಮೂಲಗಳು ತಿಳಿಸಿವೆ.
“ರಣಜಿ ಟ್ರೋಫಿಯಲ್ಲಿ ದೆಹಲಿ ನಾಯಕತ್ವ”
ಅಕ್ಟೋಬರ್ 25 ರಿಂದ ರಣಜಿ ಟ್ರೋಫಿ ಪಂದ್ಯಾವಳಿ ಆರಂಭವಾಗಲಿದ್ದು, ಈ ಟೂರ್ನಿಯಲ್ಲಿ ಆಡಲು ಪಂತ್ ಉತ್ಸುಕರಾಗಿದ್ದಾರೆ. ಒಂದು ವೇಳೆ ಬಿಸಿಸಿಐ ವೈದ್ಯಕೀಯ ತಂಡವು ಅವರಿಗೆ ಅನುಮತಿ ನೀಡಿದರೆ, ಅವರು ರೆಡ್-ಬಾಲ್ ಟೂರ್ನಿಯಲ್ಲಿ ದೆಹಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ (DDCA) ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
“ರಾಷ್ಟ್ರೀಯ ತಂಡಕ್ಕೆ ಮರಳುವಿಕೆ ಯಾವಾಗ”?
ಸದ್ಯಕ್ಕೆ, ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತದ ಏಕದಿನ ಮತ್ತು ಟಿ20 ತಂಡಗಳಲ್ಲಿ ಪಂತ್ ಅವರನ್ನು ಪರಿಗಣಿಸಲಾಗಿಲ್ಲ. ಅಲ್ಲದೆ, 2026ರ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯೂ ಕಡಿಮೆ ಎಂದು ಹೇಳಲಾಗಿದೆ. ಆದರೆ, ರಣಜಿ ಟ್ರೋಫಿಯಲ್ಲಿ ತಮ್ಮ ಫಿಟ್‌ನೆಸ್ ಸಾಬೀತುಪಡಿಸಿದರೆ, ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ತವರು ಟೆಸ್ಟ್ ಸರಣಿಯ ಮೂಲಕ ಅವರು ಭಾರತ ತಂಡಕ್ಕೆ ಮರಳುವ ಸಾಧ್ಯತೆ ದಟ್ಟವಾಗಿದೆ.