ವಿಶಾಖಪಟ್ಟಣಂ: ಸದ್ಯ ಟೀಮ್ ಇಂಡಿಯಾದ ಫಿನಿಶರ್ ಎಂದೇ ಖ್ಯಾತರಾಗಿರುವ ರಿಂಕು ಸಿಂಗ್, ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ ಫೀಲ್ಡಿಂಗ್‌ನಲ್ಲಿಯೂ ತಾನು ತಂಡದ ಆಸ್ತಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ರಿಂಕು ಸಿಂಗ್ ಬೌಂಡರಿ ಲೈನ್ ಹಾಗೂ ಇನ್‌ಫೀಲ್ಡ್‌ನಲ್ಲಿ ಮಿಂಚಿನ ಸಂಚಲನ ಮೂಡಿಸಿದರು.
ಪಂದ್ಯದ ವಿವಿಧ ಹಂತಗಳಲ್ಲಿ ಒಟ್ಟು ನಾಲ್ಕು ಅತ್ಯುತ್ತಮ ಕ್ಯಾಚ್‌ಗಳನ್ನು ಪಡೆಯುವ ಮೂಲಕ, ಅಂತರಾಷ್ಟ್ರೀಯ ಟಿ20 ಪಂದ್ಯವೊಂದರಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಭಾರತೀಯ ಆಟಗಾರ ಎಂಬ ಅಜಿಂಕ್ಯ ರಹಾನೆ ಅವರ 12 ವರ್ಷಗಳ ಹಳೆಯ ದಾಖಲೆಯನ್ನು ರಿಂಕು ಸರಿಗಟ್ಟಿದ್ದಾರೆ.
ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಾಗ, ವಿಶಾಖಪಟ್ಟಣಂನ ಪಿಚ್ ಬ್ಯಾಟರ್‌ಗಳಿಗೆ ಸ್ವರ್ಗವಾಗಿತ್ತು. ಕಿವೀಸ್ ಬ್ಯಾಟರ್‌ಗಳು ರನ್ ಮಳೆ ಹರಿಸುತ್ತಿದ್ದಾಗ ಭಾರತೀಯ ಬೌಲರ್‌ಗಳಿಗೆ ಬೆನ್ನೆಲುಬಾಗಿ ನಿಂತಿದ್ದು ರಿಂಕು ಸಿಂಗ್ ಅವರ ಚುರುಕಿನ ಫೀಲ್ಡಿಂಗ್. ಮೊದಲು ಕುಲ್ದೀಪ್ ಯಾದವ್ ಎಸೆತದಲ್ಲಿ ಅಪಾಯಕಾರಿ ಬ್ಯಾಟರ್ ಡೆವೋನ್ ಕಾನ್ವೇ ಅವರನ್ನು ಔಟ್ ಮಾಡಲು ಸಹಕರಿಸಿದ ರಿಂಕು, ಆ ಬಳಿಕ ಗ್ಲೆನ್ ಫಿಲಿಪ್ಸ್ ಅವರ ಕ್ಯಾಚ್ ಅನ್ನೂ ಲೀಲಾಜಾಲವಾಗಿ ಪಡೆದರು. ಪಂದ್ಯದ ಅತ್ಯಂತ ನಿರ್ಣಾಯಕ ಕ್ಷಣ ಎಂದರೆ ಸ್ಫೋಟಕವಾಗಿ ಆಡುತ್ತಿದ್ದ ಟಿಮ್ ಸೀಫರ್ಟ್ ವಿಕೆಟ್. ಬೌಂಡರಿ ಗೆರೆಯ ಬಳಿ ಸಿಕ್ಸರ್ ಹೋಗುತ್ತಿದ್ದ ಚೆಂಡನ್ನು ಅತ್ಯಂತ ಜಾಣ್ಮೆಯಿಂದ ಹಿಡಿದ ರಿಂಕು, ಪಂದ್ಯದ ಗತಿಯನ್ನು ಬದಲಿಸಿದರು. ಅಂತಿಮವಾಗಿ ಜ್ಯಾಕ್ ಫೌಲ್ಕ್ಸ್ ಅವರ ಕ್ಯಾಚ್ ಪಡೆಯುವುದರೊಂದಿಗೆ ತಮ್ಮ ನಾಲ್ಕನೇ ಬಲಿ ಪೂರೈಸಿದರು.
ರಹಾನೆ ದಾಖಲೆ ಮುರಿದ ರಿಂಕು
ಈ ಸಾಧನೆಯೊಂದಿಗೆ ರಿಂಕು ಸಿಂಗ್ ಅವರು 2014ರಲ್ಲಿ ಇಂಗ್ಲೆಂಡ್ ವಿರುದ್ಧ ನಾಲ್ಕು ಕ್ಯಾಚ್ ಪಡೆದಿದ್ದ ಅಜಿಂಕ್ಯ ರಹಾನೆ ಅವರ ದಾಖಲೆಯ ಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಇನ್ನುಳಿದಂತೆ ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜ ಫೀಲ್ಡರ್‌ಗಳು ಒಂದು ಪಂದ್ಯದಲ್ಲಿ ತಲಾ ಮೂರು ಕ್ಯಾಚ್‌ಗಳನ್ನು ಪಡೆದಿದ್ದೇ ಇದುವರೆಗಿನ ಸಾಧನೆಯಾಗಿತ್ತು. ಸಂಖ್ಯಾಶಾಸ್ತ್ರದ ಪ್ರಕಾರ ನೋಡುವುದಾದರೆ, ರಿಂಕು ಸಿಂಗ್ ಅವರ ಫೀಲ್ಡಿಂಗ್ ಸಾಮರ್ಥ್ಯ ಅಚ್ಚರಿ ಮೂಡಿಸುವಂತಿದೆ. ತಾವು ಆಡಿರುವ 38 ಇನಿಂಗ್ಸ್‌ಗಳಲ್ಲಿ 30 ಕ್ಯಾಚ್‌ಗಳನ್ನು ಪಡೆದಿರುವ ಇವರು, ಪ್ರತಿ ಇನಿಂಗ್ಸ್‌ಗೆ ಸರಾಸರಿ 0.789 ಕ್ಯಾಚ್‌ಗಳ ದಾಖಲೆ ಹೊಂದಿದ್ದಾರೆ. ಇದು ಕನಿಷ್ಠ 20 ಕ್ಯಾಚ್‌ಗಳನ್ನು ಪಡೆದ ಭಾರತೀಯ ಫೀಲ್ಡರ್‌ಗಳಲ್ಲೇ ಅತ್ಯುತ್ತಮ ಸರಾಸರಿಯಾಗಿದೆ.
ಪಂದ್ಯದ ಅಂಕಿಅಂಶಗಳನ್ನು ನೋಡುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಏಳು ವಿಕೆಟ್ ನಷ್ಟಕ್ಕೆ 215 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಟಿಮ್ ಸೀಫರ್ಟ್ 62 ರನ್ ಹಾಗೂ ಡೆವೋನ್ ಕಾನ್ವೇ 44 ರನ್‌ಗಳ ಕೊಡುಗೆ ನೀಡಿದರು. ಭಾರತದ ಪರ ಬೌಲಿಂಗ್‌ನಲ್ಲಿ ಅರ್ಷದೀಪ್ ಸಿಂಗ್ ಮತ್ತು ಕುಲ್ದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದು ಯಶಸ್ವಿ ಎನಿಸಿಕೊಂಡರು. ಒಟ್ಟಾರೆಯಾಗಿ, ಈ ಪಂದ್ಯವು ರಿಂಕು ಸಿಂಗ್ ಅವರ ಫೀಲ್ಡಿಂಗ್ ಕೌಶಲ್ಯಕ್ಕೆ ಸಾಕ್ಷಿಯಾಯಿತು ಮತ್ತು ಆಧುನಿಕ ಕ್ರಿಕೆಟ್‌ನಲ್ಲಿ ಫೀಲ್ಡಿಂಗ್ ಕೂಡ ಪಂದ್ಯದ ಫಲಿತಾಂಶವನ್ನು ಹೇಗೆ ನಿರ್ಧರಿಸುತ್ತದೆ ಎಂಬುದನ್ನು ಜಗತ್ತಿಗೆ ಸಾರಿತು.
ಇದನ್ನೂ ಓದಿ: ರೋಹಿತ್ ಶರ್ಮಾ ಎಂಬ ನಿಸ್ವಾರ್ಥ ನಾಯಕನ ಬಗ್ಗೆ ರಾಹುಲ್ ದ್ರಾವಿಡ್ ಮನದಾಳದ ಮಾತು!



















