ನವದೆಹಲಿ: ನೀವು ಆಧಾರ್ ಕಾರ್ಡ್‌ನಲ್ಲಿನ ಮಾಹಿತಿಗಳನ್ನು ಬದಲಾಯಿಸಬೇಕೇ? ಇನ್ನು ಮುಂದೆ ಇದಕ್ಕೆ ಹೆಚ್ಚುವರಿ ಶುಲ್ಕ ತೆರಬೇಕಾಗುತ್ತದೆ.
ಹೌದು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ಕಾರ್ಡ್‌ನಲ್ಲಿನ ಮಾಹಿತಿಗಳನ್ನು ನವೀಕರಿಸಲು ವಿಧಿಸುವ ಶುಲ್ಕವನ್ನು ಹೆಚ್ಚಿಸಿದೆ. ಈ ಪರಿಷ್ಕೃತ ದರಗಳು ಅಕ್ಟೋಬರ್ 1 ರಿಂದಲೇ ಜಾರಿಗೆ ಬಂದಿದ್ದು, ಸೆಪ್ಟೆಂಬರ್ 30, 2028ರವರೆಗೆ ಚಾಲ್ತಿಯಲ್ಲಿರುತ್ತವೆ.
ಪರಿಷ್ಕೃತ ಶುಲ್ಕಗಳ ವಿವರ
ಜನಸಂಖ್ಯೆ ಸಂಬಂಧಿ ಮಾಹಿತಿ: ಹೆಸರು, ವಿಳಾಸ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಮತ್ತು ಇಮೇಲ್‌ನಂತಹ ವಿವರಗಳನ್ನು ಪ್ರತ್ಯೇಕವಾಗಿ ಬದಲಾಯಿಸಲು ಈಗ 75 ರೂ. ಪಾವತಿಸಬೇಕು. ಈ ಹಿಂದೆ ಈ ಸೇವೆಗೆ 50 ರೂ. ಶುಲ್ಕವಿತ್ತು. ಆದರೆ, ಬಯೋಮೆಟ್ರಿಕ್ ಅಪ್‌ಡೇಟ್ ಜೊತೆಗೆ ಈ ಬದಲಾವಣೆಗಳನ್ನು ಮಾಡಿದರೆ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ.
ಬಯೋಮೆಟ್ರಿಕ್ ಮಾಹಿತಿ: ಬೆರಳಚ್ಚು, ಕಣ್ಣಿನ ಪಾಪೆ (ಐರಿಸ್ ಸ್ಕ್ಯಾನ್) ಅಥವಾ ಫೋಟೋವನ್ನು ನವೀಕರಿಸಲು ಈಗ 125 ರೂ. ಶುಲ್ಕ ನಿಗದಿಪಡಿಸಲಾಗಿದೆ. ಈ ಶುಲ್ಕವು ಅಕ್ಟೋಬರ್ 2028 ರಿಂದ 150 ಕ್ಕೆ ಏರಿಕೆಯಾಗಲಿದೆ.
ದಾಖಲೆಗಳ ನವೀಕರಣ: ಗುರುತಿನ ಅಥವಾ ವಿಳಾಸದ ಪುರಾವೆಗಳನ್ನು ನವೀಕರಿಸಲು myAadhaar ಪೋರ್ಟಲ್‌ನಲ್ಲಿ ಜೂನ್ 14, 2026 ರವರೆಗೆ ಉಚಿತವಾಗಿದೆ. ಆದರೆ, ನೋಂದಣಿ ಕೇಂದ್ರಗಳಲ್ಲಿ ಇದೇ ಸೇವೆಗೆ 75 ರೂ. ಪಾವತಿಸಬೇಕಾಗುತ್ತದೆ (ಹಿಂದೆ 50 ರೂ. ಇತ್ತು).
ಆಧಾರ್ ಪ್ರಿಂಟ್‌ಔಟ್: ಇ-ಕೆವೈಸಿ ಅಥವಾ ಇತರೆ ವಿಧಾನಗಳ ಮೂಲಕ ಆಧಾರ್ ಪ್ರಿಂಟ್‌ಔಟ್ ಪಡೆಯಲು ಮೊದಲ ಹಂತದಲ್ಲಿ 40 ರೂ. ಮತ್ತು ಎರಡನೇ ಹಂತದಲ್ಲಿ 50 ರೂ. ಶುಲ್ಕ ವಿಧಿಸಲಾಗುತ್ತದೆ.
ಮಕ್ಕಳಿಗೆ ಉಚಿತ ಸೇವೆ
ಸಮಯಕ್ಕೆ ಸರಿಯಾಗಿ ಬಯೋಮೆಟ್ರಿಕ್ ನವೀಕರಣವನ್ನು ಪ್ರೋತ್ಸಾಹಿಸಲು, ಯುಐಡಿಎಐ ಕೆಲವು ವಯಸ್ಸಿನ ಮಕ್ಕಳಿಗೆ ಶುಲ್ಕ ವಿನಾಯಿತಿ ನೀಡಿದೆ.
5 ರಿಂದ 7 ವರ್ಷ ಮತ್ತು 15 ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ಮೊದಲ ಕಡ್ಡಾಯ ಬಯೋಮೆಟ್ರಿಕ್ ಅಪ್‌ಡೇಟ್ ಸಂಪೂರ್ಣವಾಗಿ ಉಚಿತವಾಗಿದೆ.
7 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಬಯೋಮೆಟ್ರಿಕ್ ಅಪ್‌ಡೇಟ್‌ಗೆ ಸಾಮಾನ್ಯವಾಗಿ 125 ರೂ. ಶುಲ್ಕವಿದ್ದರೂ, ಸೆಪ್ಟೆಂಬರ್ 30, 2026 ರವರೆಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಮನೆ ಬಾಗಿಲಿಗೆ ಸೇವೆ
ನೋಂದಣಿ ಕೇಂದ್ರಗಳಿಗೆ ಭೇಟಿ ನೀಡಲು ಸಾಧ್ಯವಾಗದ ನಿವಾಸಿಗಳಿಗಾಗಿ ಮನೆ ಬಾಗಿಲಿಗೆ ನೋಂದಣಿ ಸೇವೆಯನ್ನು ಸಹ ಒದಗಿಸಲಾಗುತ್ತದೆ. ಮನೆಗೆ ಬಂದು ನೋಂದಣಿ ಮಾಡುವ ಸೇವೆಗೆ (ಜಿಎಸ್‌ಟಿ ಸೇರಿದಂತೆ) 700 ರೂ. ಶುಲ್ಕ ವಿಧಿಸಲಾಗುತ್ತದೆ. ಒಂದೇ ವಿಳಾಸದಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಈ ಸೇವೆಯನ್ನು ಪಡೆದರೆ, ಪ್ರತಿಯೊಬ್ಬ ಹೆಚ್ಚುವರಿ ವ್ಯಕ್ತಿಗೆ 350 ರೂ. ಪಾವತಿಸಬೇಕಾಗುತ್ತದೆ.