ಇಸ್ರೇಲ್, ಇರಾನ್ ಹಾಗೂ ಹಮಾಸ್ ಮಧ್ಯೆ ಯುದ್ಧದ ಕಾರ್ಮೋಡ ಆವರಿಸಿದೆ. ಹಮಾಸ್ ನಾಯಕ ಇಸ್ಮಾಯಿಲ್ ಹನಿನನ್ನು ಇರಾನ್ ನಲ್ಲಿಯೇ ರಾಕೆಟ್ ನಿಂದ ಹತ್ಯೆ ಮಾಡಿದ ನಂತರ ಇರಾನ್ ಹಾಗೂ ಹಮಾಸ್ ಬೆಂಬಲಿತ ರಾಷ್ಟ್ರಗಳು ಕೋಪದಿಂದ ಕುದಿಯುತ್ತಿವೆ. ಹೀಗಾಗಿ ಇಸ್ರೇಲ್ ವಿರುದ್ಧ ಮುಗಿ ಬಿದ್ದಿವೆ.
ಲೆಬನಾನ್ ಬೆಂಬಲಿತ ಹಿಜ್ಬುಲ್ಹಾ ಉಗ್ರಗಾಮಿ ಸಂಘಟನೆ ದಕ್ಷಿಣ ಲೆಬನಾನ್ ನಿಂದ ಇಸ್ಟ್ರೇಲ್ ನ ಬೈಟ್ ಹಿಲ್ಲೆಲ್ ನತ್ತ ಒಂದಾದ ಮೇಲೊಂದರಂತೆ 50ಕ್ಕೂ ಅಧಿಕ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್ ನ್ನು ಹೆದರಿಸುವ ಪ್ರಯತ್ನ ಮಾಡುತ್ತಿದೆ. 50ಕ್ಕೂ ಅಧಿಕ ಕತ್ಯುಶ ರಾಕೆಟ್ ಗಳನ್ನು ಉತ್ತರ ಇಸ್ರೇಲ್ ನತ್ತ ಹಿಜ್ಬುಲ್ಲಾ ಸಂಘಟನೆ ಹಾರಿಸಿದ್ದು, ಈಗ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಆಗಸ್ಟ್ 3 ರಂದು ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಹಿಜ್ಬುಲ್ ನ ಅಧಿಕಾರಿ ಅಲಿ ನಝಿಹ್ ಅಬ್ದ್ ಅಲಿ ಸಾವನ್ನಪ್ಪಿದ್ದ. ಹಿಜ್ಬುಲ್ಲಾ ಪ್ರಮುಖ ಕಮಾಂಡರ್ ಫೌದ್ ಶುಕ್ರ್ ಹತ್ಯೆಯಾದ ಕೆಲವೇ ದಿನಗಳ ಅಂತರದಲ್ಲಿ ಈ ಹತ್ಯೆ ನಡೆದಿತ್ತು. ಈ ಹತ್ಯೆಗಳಿಂದಾಗಿ ಸೇಡು ತೀರಿಸಿಕೊಳ್ಳಲು ಹಿಜ್ಬುಲ್ಲಾ ಸಂಘಟನೆ ಮುಂದಾಗಿದೆ. ಅಲ್ಲದೇ, ಇಸ್ರೇಲ್ ಇಲ್ಲಿಯವರೆಗೆ ಮಾಡಿರುವ ಹಾನಿಗಳಿಗೆ ಒಟ್ಟಾಗಿ ಹಿಜ್ಬುಲ್ಲಾ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ಈಗ ತನ್ನ ನಾಯಕರ ಹತ್ಯೆಗೆ ಹಿಜ್ಬುಲ್ಲಾ ತೀವ್ರ ಪ್ರತೀಕಾರದ ಪ್ರತಿಜ್ಞೆ ಮಾಡಿದೆ. ಹೀಗಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧದ ಆತಂಕ ಮತ್ತಷ್ಟು ಹೆಚ್ಚಾಗಿದೆ. ಯುದ್ಧದ ವಾತಾವರಣ ಪ್ರಕೃತಿ ಹಾಗೂ ಅಭಿವೃದ್ಧಿಗೆ ಸಾಕಷ್ಟು ಹಿನ್ನಡೆ ಸೃಷ್ಟಿಸುವುದಂತೂ ಶತಸಿದ್ಧ.