ಬಾರಾಮತಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ 5 ಮಂದಿಯ ಸಾವಿಗೆ ಕಾರಣವಾದ ಭೀಕರ ವಿಮಾನ ಅವಘಡದ ತನಿಖೆ ಚುರುಕುಗೊಂಡಿದ್ದು, ಘಟನೆಯ ಅಂತಿಮ ಕ್ಷಣಗಳಲ್ಲಿ ಏನಾಯಿತು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಕಾಕ್‌ಪಿಟ್‌ನಲ್ಲಿ ಕೇಳಿಬಂದ ಕೊನೆಯ ಮಾತುಗಳು
ಅಪಘಾತದ ಕೆಲವೇ ಸೆಕೆಂಡುಗಳ ಮೊದಲು ವಿಮಾನದ ಕಾಕ್‌ಪಿಟ್‌ನಲ್ಲಿ ಪೈಲಟ್‌ಗಳ ನಡುವೆ ನಡೆದ ಸಂಭಾಷಣೆಯ ಆಧಾರದ ಮೇಲೆ ಅಧಿಕಾರಿಗಳು ಘಟನೆಯನ್ನು ವಿಶ್ಲೇಷಿಸುತ್ತಿದ್ದಾರೆ. ವಿಮಾನವು ಎರಡನೇ ಬಾರಿಗೆ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾಗ, ಅನಿರೀಕ್ಷಿತವಾಗಿ ನಿಯಂತ್ರಣ ತಪ್ಪಿದ ಕ್ಷಣದಲ್ಲಿ ಪೈಲಟ್‌ಗಳು ಆತಂಕದಿಂದ “ಓಹ್ ಶಿಟ್” (Oh S***) ಎಂದು ಉದ್ಗರಿಸಿದ್ದಾರೆ. ಈ ಧ್ವನಿಮುದ್ರಣವು ವಿಮಾನವು ಅತ್ಯಂತ ವೇಗವಾಗಿ ಮತ್ತು ಅನಿರೀಕ್ಷಿತವಾಗಿ ತಾಂತ್ರಿಕ ಸಂಕಷ್ಟಕ್ಕೆ ಸಿಲುಕಿರುವುದನ್ನು ಸೂಚಿಸುತ್ತಿದೆ. ವಿಶೇಷವೆಂದರೆ, ವಿಮಾನವು ನೆಲಕ್ಕೆ ಅಪ್ಪಳಿಸುವ ಮುನ್ನ ಯಾವುದೇ ‘ಮೇ ಡೇ’ (Mayday) ಅಥವಾ ತುರ್ತು ಪರಿಸ್ಥಿತಿಯ ಸಂಕೇತವನ್ನು ರವಾನಿಸಲು ಪೈಲಟ್‌ಗಳಿಗೆ ಕಾಲಾವಕಾಶವೇ ಸಿಕ್ಕಿಲ್ಲ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ವಿಮಾನಯಾನ ಸಚಿವಾಲಯದ ಮಾಹಿತಿಯಂತೆ, ಬುಧವಾರ ಬೆಳಿಗ್ಗೆ 8:18ಕ್ಕೆ ವಿಮಾನವು ಬಾರಾಮತಿ ಎಟಿಸಿ ಸಂಪರ್ಕಕ್ಕೆ ಬಂದಿತ್ತು. ಮೊದಲ ಬಾರಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದಾಗ ರನ್‌ವೇ ಸರಿಯಾಗಿ ಕಾಣಿಸದ ಕಾರಣ ‘ಗೋ-ಅರೌಂಡ್'(ಆಗಸದಲ್ಲಿ ಸುತ್ತುಬರಲು) ಮಾಡಲು ಸೂಚಿಸಲಾಯಿತು. ಎರಡನೇ ಪ್ರಯತ್ನದಲ್ಲಿ 8:43ಕ್ಕೆ ಲ್ಯಾಂಡಿಂಗ್ ಮಾಡಲು ಅನುಮತಿ ನೀಡಿದಾಗ ಪೈಲಟ್‌ಗಳು ರನ್‌ವೇ ಕಾಣಿಸುತ್ತಿದೆ ಎಂದು ತಿಳಿಸಿದ್ದರು. ಆದರೆ, ನಿಯಮದಂತೆ ಪೈಲಟ್‌ಗಳು ನೀಡಬೇಕಿದ್ದ ‘ಲ್ಯಾಂಡಿಂಗ್ ಕ್ಲಿಯರೆನ್ಸ್ ಕನ್ಫರ್ಮೇಷನ್’ (Readback) ಬರಲೇ ಇಲ್ಲ. ಮರುಕ್ಷಣವೇ ಅಂದರೆ 8:44ಕ್ಕೆ ರನ್‌ವೇ ಪಕ್ಕದಲ್ಲಿ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡವು.
ಬ್ಲಾಕ್ ಬಾಕ್ಸ್ ಪತ್ತೆ: ತನಿಖೆಗೆ ಹೊಸ ತಿರುವು
ಅವಘಡ ಸಂಭವಿಸಿದ ಒಂದು ದಿನದ ನಂತರ ಅಂದರೆ ಗುರುವಾರ ತನಿಖಾಧಿಕಾರಿಗಳು ವಿಮಾನದ ಅತ್ಯಂತ ಪ್ರಮುಖ ಭಾಗವಾದ ‘ಬ್ಲಾಕ್ ಬಾಕ್ಸ್’ ಅನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ವಿಮಾನದ ಹಿಂಭಾಗದಲ್ಲಿ ಸಿಕ್ಕಿರುವ ಈ ಬ್ಲಾಕ್ ಬಾಕ್ಸ್‌ನಲ್ಲಿ ‘ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್’ (CVR) ಮತ್ತು ‘ಫ್ಲೈಟ್ ಡೇಟಾ ರೆಕಾರ್ಡರ್’ (FDR) ಎರಡೂ ಇವೆ. ಇದನ್ನು ಈಗ ಹೆಚ್ಚಿನ ವಿಶ್ಲೇಷಣೆಗಾಗಿ ದೆಹಲಿಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (DGCA) ಕಳುಹಿಸಲಾಗಿದೆ. ವಿಮಾನದ ವೇಗ, ಎತ್ತರ, ಎಂಜಿನ್ ಕಾರ್ಯಕ್ಷಮತೆ ಮತ್ತು ಪೈಲಟ್‌ಗಳ ಅಂತಿಮ ಕ್ಷಣದ ನಿರ್ಧಾರಗಳ ಬಗ್ಗೆ ಈ ಬ್ಲಾಕ್ ಬಾಕ್ಸ್ ನಿಖರ ಮಾಹಿತಿ ನೀಡಲಿದೆ.
ಸ್ಥಳಕ್ಕೆ ಎಎಐಬಿ ಭೇಟಿ
ವಿಮಾನ ಅಪಘಾತ ತನಿಖಾ ದಳದ (AAIB) ಹಿರಿಯ ಅಧಿಕಾರಿಗಳು ಈಗಾಗಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ವಿಮಾನದ ಅವಶೇಷಗಳನ್ನು ಸಂಗ್ರಹಿಸಿದ್ದಾರೆ. ವಿಮಾನವು ನೆಲಕ್ಕೆ ಅಪ್ಪಳಿಸುವ ಮುನ್ನ ಗಾಳಿಯಲ್ಲಿಯೇ ಪಲ್ಟಿಯಾಗಿರುವ ಸಾಧ್ಯತೆ ಇದೆ ಎಂದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ಈ ಭೀಕರ ದುರಂತದ ಸಂಪೂರ್ಣ ವರದಿ ಹೊರಬರಲು ಕೆಲವು ವಾರಗಳು ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಇಂದು ಸಕಲ ಸರ್ಕಾರಿ ಗೌರವದೊಂದಿಗೆ ಅಜಿತ್ ಪವಾರ್ ಅಂತ್ಯಕ್ರಿಯೆ | ಪ್ರಧಾನಿ ಮೋದಿ, ಅಮಿತ್ ಶಾ ಭಾಗಿ



















