ಬೆಂಗಳೂರು: ಈಗಾಗಲೇ ನಿವೃತ್ತಿಯಾಗಿದ್ದೇನೆ. ಇನ್ನೇನು ಕೆಲವೇ ದಿನಗಳಲ್ಲಿ ನಿವೃತ್ತಿಯಾಗುತ್ತೇನೆ. ನಿವೃತ್ತಿಯ ನಂತರ ಆದಾಯಕ್ಕೆ ಏನು ಮಾಡಬೇಕು? ಮಕ್ಕಳ ಬಳಿ ದುಡ್ಡು ಕೇಳಲು ಸ್ವಾಭಿಮಾನ ಅಡ್ಡ ಬರುತ್ತದೆ. ಮುಂದೇನು ಮಾಡುವುದು ಎಂಬ ಚಿಂತೆ ಕಾಡುತ್ತಿದೆಯೇ? ಹಾಗಾದ್ರೆ, ಚಿಂತೆ ಬೇಡ. ನಿಮ್ಮ ಬಳಿ ಇರುವ ಸಣ್ಣ ಮೊತ್ತದ ಹೂಡಿಕೆಯಿಂದಲೇ ತಿಂಗಳಿಗೆ 11 ಸಾವಿರ ರೂಪಾಯಿಗಿಂತ ಹೆಚ್ಚಿನ ಬಡ್ಡಿ ಆದಾಯ ಗಳಿಸುವ ಯೋಜನೆ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತೇವೆ.
ಹೌದು, ಪೋಸ್ಟ್ ಆಫೀಸಿನ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ (SCSS) ನೀವು ಹೂಡಿಕೆ ಮಾಡಿದರೆ, ನಿವೃತ್ತಿ ಜೀವನವನ್ನು ನೀವು ಬಡ್ಡಿ ಆದಾಯದಲ್ಲಿಯೇ ಕಳೆಯಬಹುದು. 60 ವರ್ಷ ತುಂಬಿದ ಅಥವಾ ದಾಟಿದ ಯಾರು ಬೇಕಾದರೂ ಪೋಸ್ಟ್ ಆಫೀಸಿನ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಸ್ವಯಂ ನಿವೃತ್ತಿ ಹೊಂದಿದ 50 ವರ್ಷ ವಯಸ್ಸಿನವರೂ ಹೂಡಿಕೆ ಮಾಡಬಹುದು. ಹಿರಿಯ ನಾಗರಿಕರಾಗಿಯೇ ರೂಪಿಸಿದ ಯೋಜನೆ ಇದಾಗಿದೆ.
ಹೀಗಿದೆ ಆದಾಯದ ಲೆಕ್ಕಾಚಾರ
ಉದಾಹರಣೆಗೆ, ನೀವು ಈ ಯೋಜನೆಯಲ್ಲಿ 15 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದೀರಿ ಎಂದುಕೊಳ್ಳಿ. ಶೇ.8.2ರ ಬಡ್ಡಿಯಂತೆ, ನಿಮಗೆ ವರ್ಷಕ್ಕೆ 1,23,000 ರೂಪಾಯಿ ಬಡ್ಡಿ ಸಿಗುತ್ತದೆ. ಅಂದರೆ, ತಿಂಗಳಿಗೆ ಸುಮಾರು 11,750 ರೂಪಾಯಿ ನಿಮ್ಮ ಕೈ ಸೇರುತ್ತದೆ. ಇದು 5 ವರ್ಷಗಳ ಅವಧಿಯ ಯೋಜನೆಯಾಗಿದೆ. ನಿಮಗೆ ಇಷ್ಟವಿದ್ದರೆ ಇನ್ನೂ 3 ವರ್ಷ ವಿಸ್ತರಿಸಬಹುದು.
ಇದು ಕೇಂದ್ರ ಸರ್ಕಾರ ಯೋಜನೆಯಾಗಿದ್ದು, ನೂರಕ್ಕೆ ನೂರರಷ್ಟು ರಿಟರ್ನ್ಸ್ ಗ್ಯಾರಂಟಿ ಇರುತ್ತದೆ. ಈ ಯೋಜನೆ ಅಡಿಯಲ್ಲಿ ಒಬ್ಬ ವ್ಯಕ್ತಿ ತನ್ನ ಖಾತೆಯಲ್ಲಿ 30 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ಒಂದು ವೇಳೆ, ಜಂಟಿ ಖಾತೆ ತೆರೆದರೆ, ಒಟ್ಟು 60 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಲು ಅವಕಾಶವಿದೆ.
ಇದನ್ನೂ ಓದಿ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 84 ಹುದ್ದೆಗಳಿಗೆ ಅರ್ಜಿ ಆಹ್ವಾನ : 1.77 ಲಕ್ಷ ರೂ. ಸ್ಯಾಲರಿ



















