ಶಿವಮೊಗ್ಗ: ರಾಜ್ಯ ಸರ್ಕಾರ ಹಿಂದೂ ನಾಯಕರ ಓಡಾಟಕ್ಕೆ ನಿರ್ಬಂಧ ವಿಧಿಸುತ್ತಿದೆ. ಹಿಂದೂ ನಾಯಕ ಪ್ರಮೋದ್ ಮುತಾಲಿಕ್ ಓಡಾಟಕ್ಕೆ ನಿರ್ಬಂಧಿ ವಿಧಿಸಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುತಾಲಿಕ್ ಮೇಲೆ ಯಾವುದೇ ಆರೋಪ, ಪ್ರಕರಣ ಇಲ್ಲದಿದ್ದರೂ ಪ್ರವೇಶ ನಿರಾಕರಣೆ ಮಾಡಿದ್ದೇಕೆ? ಅವರು ಜಿಲ್ಲೆಗೆ ಸುದ್ದಿಗೋಷ್ಠಿ ನಡೆಸಲು ಬರುತ್ತಿದ್ದರು. ಅವರ ಮೇಲಿನ ಯಾವುದೇ ಆರೋಪ ಸಾಬೀತಾಗಿಲ್ಲ. ಅಷ್ಟಕ್ಕೂ ಅವರು ಲವ್ ಜಿಹಾದ್ ಕುರಿತು ಪುಸ್ತಕ ಬಿಡುಗಡೆ ಮಾಡಲಿದ್ದರು. ಈಗಾಗಲೇ ಈ ಪುಸ್ತಕ ಹಲವು ಕಡೆ ಬಿಡುಗಡೆ ಆಗಿದೆ. ಆದಾಗ್ಯೂ ಅವರಿಗೆ ರಸ್ತೆಯಲ್ಲಿ ತಡೆದು ಪ್ರವೇಶ ನಿರಾಕರಿಸಲಾಗಿದೆ. ಇಲ್ಲಿನ ಎಸ್ಪಿ ಯಾರನ್ನು ತೃಪ್ತಿ ಪಡಿಸಲು ಹೊರಟಿದ್ದಾರೆ? ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡ್ರಗ್, ಮರಳು ಮತ್ತಿತರ ಮಾಫಿಯಾಗಳ ಓಡಾಟಕ್ಕೆ ಯಾವುದೇ ನಿರ್ಬಂಧ ಇಲ್ಲ. ಆದರೆ ಹಿಂದೂ ನಾಯಕನಿಗೆ ನಿರ್ಬಂಧ ಹೇರುತ್ತೀರಾ? ಇದು ಕಾಂಗ್ರೆಸ್ ಸರ್ಕಾರಕ್ಕೆ ಶೋಭೆ ತರುವಂತಹುದಲ್ಲ. ಇದಕ್ಕೆ ಜನ ನಿಮಗೆ ತಕ್ಕ ಉತ್ತರ ನೀಡುತ್ತಾರೆ. ಹಿಂದುತ್ವ, ಹಿಂದೂ ಸಮಾಜದ ರಕ್ಷಣೆಗೆ ಅವರು ಹೋರಾಟ ನಡೆಸುತ್ತಿದ್ದಾರೆ. ಜಿಲ್ಲಾಡಳಿತದ ಕ್ರಮವನ್ನು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದಾರೆ. ಸಂವಿಧಾನದ ಬಗ್ಗೆ ಪದೇ ಪದೇ ಮಾತನಾಡುವ ಸರ್ಕಾರ ಸಂವಿಧಾನದತ್ತ ಹಕ್ಕನ್ನು ಕಿತ್ತುಕೊಳ್ಳುತ್ತಿದೆ. ಪೊಲೀಸರು ನೀಡಿದ ವರದಿ ಅನುಸಾರ ನಿರ್ಬಂಧ ವಿಧಿಸಲಾಗಿದೆ ಎಂದು ಡಿಸಿ ಹೇಳಿದ್ದಾರೆ. ಎಸ್ಪಿ ಸಹ ಬೇರೆ ಬೇರೆ ಕಾರಣಕ್ಕಾಗಿ ನಿರ್ಬಂಧ ಹೇರಿದ್ದೇವೆ ಎಂದಿದ್ದಾರೆ ಎಂದು ಕಿಡಿಕಾರಿದ್ದಾರೆ.