ಬೆಂಗಳೂರು: ಟ್ರಂಕ್ ನಲ್ಲೋ, ಪುಸ್ತಕದ ನಡುವಿನ ಹಾಳೆಗಳಲ್ಲೋ 2 ಸಾವಿರ ರೂಪಾಯಿ ನೋಟುಗಳು ಹಾಗೆಯೇ ಉಳಿದಿರುತ್ತವೆ. ಅವು ಯಾವಾಗಲೋ ಕೆಲಸ ಮಾಡುವಾಗ ಸಿಕ್ಕಿರುತ್ತವೆ. ಅರೆ, 2 ಸಾವಿರ ರೂಪಾಯಿ ನೋಟುಗಳ ಚಲಾವಣೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ರದ್ದುಗೊಳಿಸಿದೆಯಲ್ಲ ಏನು ಮಾಡುವುದು ಎಂಬ ಚಿಂತೆ ಕಾಡುತ್ತಿದೆಯೇ? ಹಾಗಾದರೆ, ನೀವಿನ್ನು ಚಿಂತೆ ಮಾಡಬೇಕಿಲ್ಲ. ನಿಮ್ಮ ಬಳಿ ಇರುವ 2 ಸಾವಿರ ರೂಪಾಯಿ ನೋಟುಗಳನ್ನು ಈಗಲೂ ಬದಲಾವಣೆ ಮಾಡಿಕೊಳ್ಳಬಹುದು.
ಹೌದು, 2 ಸಾವಿರ ರೂಪಾಯಿ ನೋಟುಗಳ ಕುರಿತು ಆರ್ ಬಿಐ ಹೊಸ ಸೂಚನೆ ನೀಡಿದೆ. ಯಾರ ಬಳಿ 2 ಸಾವಿರ ರೂಪಾಯಿ ನೋಟುಗಳಿವೆಯೇ, ಅವರು ಭಾರತೀಯ ರಿಸರ್ವ್ ಬ್ಯಾಂಕ್ ನ ಕಚೇರಿಗಳಿಗೆ ತೆರಳಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ ಎಂದು ಸೂಚಿಸಿದೆ. ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಆರ್ ಬಿಐ ಕಚೇರಿ ಇದೆ. ಅಲ್ಲಿಗೆ ತೆರಳಿ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ.
ಅಂಚೆ ಮೂಲಕವೂ ಬದಲಾವಣೆ ಮಾಡಿಕೊಳ್ಳಿ
ದೂರ ಊರುಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಇರುವವರು ಕೂಡ ನೋಟುಗಳನ್ನು ಸುಲಭವಾಗಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಪೋಸ್ಟ್ ಆಫೀಸ್ ಗಳ ಮೂಲಕ 2 ಸಾವಿರ ರೂಪಾಯಿ ನೋಟುಗಳನ್ನು ಆರ್ ಬಿಐ ಕಚೇರಿಗೆ ಪೋಸ್ಟ್ ಮಾಡಬೇಕು. ಜನ ಕಳುಹಿಸಿದ ಮೊತ್ತವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತದೆ ಎಂದು ಆರ್ ಬಿಐ ತಿಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ 2023ರ ಅಕ್ಟೋಬರ್ 19ರಂದು ದೇಶಾದ್ಯಂತ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದೆ. ಇದುವರೆಗೆ ಬ್ಯಾಂಕ್, ಆರ್ ಬಿಐ ಮೂಲಕ 3.56 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಆರ್ ಬಿಐ ಸಂಗ್ರಹಿಸಿದೆ. ಇನ್ನೂ 5,551 ಕೋಟಿ ರೂ. ಮೌಲ್ಯದ ನೋಟುಗಳು ಜನರ ಬಳಿಯೇ ಇವೆ. ಅವುಗಳನ್ನು ಬದಲಾವಣೆ ಮಾಡಿಕೊಳ್ಳುವಂತೆ ಆರ್ ಬಿಐ ಸೂಚನೆ ನೀಡಿದೆ.
ಇದನ್ನೂ ಓದಿ : ಬಡವರು ಮನೆ ನಿರ್ಮಿಸಿಕೊಳ್ಳಲು ಸರ್ಕಾರದಿಂದ 2 ಲಕ್ಷ ರೂ. ಸಹಾಯಧನ | ಯೋಜನೆಯ ಮಾಹಿತಿ ಇಲ್ಲಿದೆ!


















