ಜೈಪುರ: ರಾಜಸ್ಥಾನದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಕಂಬಳಿ ಮತ್ತು ಬೆಡ್‌ಶೀಟ್‌ಗಾಗಿ ನಡೆದ ಜಗಳವೊಂದು ಭಾರತೀಯ ಸೇನೆ ಯೋಧರೊಬ್ಬರ ಬರ್ಬರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಯೋಧರೊಬ್ಬರಿಗೆ ರೈಲ್ವೆ ಕೋಚ್ ಅಟೆಂಡೆಂಟ್ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ನಿಷ್ಪಕ್ಷ ತನಿಖೆಗೆ ಆದೇಶಿಸಿದೆ.
ಭಾರತೀಯ ಸೇನೆಯ ಯೋಧ ಜಿಗರ್ ಚೌಧರಿ ಅವರು ಕರ್ತವ್ಯದಿಂದ ಕೆಲ ದಿನಗಳ ರಜೆ ಪಡೆದು ಗುಜರಾತ್‌ನ ಸಬರಮತಿಗೆ ರೈಲಿನಲ್ಲಿ ತೆರಳುತ್ತಿದ್ದರು. ನವೆಂಬರ್ 2ರ ರಾತ್ರಿ ಪಂಜಾಬ್‌ನ ಫಿರೋಜ್‌ಪುರ್ ನಿಲ್ದಾಣದಿಂದ 19224 ಜಮ್ಮು ತಾವಿ – ಸಬರಮತಿ ಎಕ್ಸ್‌ಪ್ರೆಸ್‌ನ ಸ್ಲೀಪರ್ ಕೋಚ್ ಹತ್ತಿದ್ದರು. ಪ್ರಯಾಣದ ವೇಳೆ ಚಳಿ ಇದ್ದ ಕಾರಣ, ಅವರು ಬಿ4 ಎಸಿ ಕೋಚ್‌ನಲ್ಲಿದ್ದ ಅಟೆಂಡೆಂಟ್‌ನನ್ನು ಕರೆದು, ಕಂಬಳಿ ಮತ್ತು ಬೆಡ್‌ಶೀಟ್ ನೀಡುವಂತೆ ಕೇಳಿಕೊಂಡಿದ್ದಾರೆ.
ಆದರೆ, ನಿಯಮಗಳ ಪ್ರಕಾರ ಅವುಗಳನ್ನು ನೀಡಲು ಸಾಧ್ಯವಿಲ್ಲವೆಂದು ಅಟೆಂಡೆಂಟ್ ನಿರಾಕರಿಸಿದ್ದಾನೆ. ಇದು ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ. ಕೆಲವೇ ಕ್ಷಣಗಳಲ್ಲಿ ವಾಗ್ವಾದ ತಾರಕಕ್ಕೇರಿ, ಚೌಧರಿ ಅವರ ಕಾಲಿಗೆ ಅಟೆಂಡೆಂಟ್ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡು ರಕ್ತನಾಳ ತುಂಡಾದ ಪರಿಣಾಮ, ಯೋಧ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರೈಲು ಬಿಕಾನೇರ್ ತಲುಪಿದಾಗ, ಪ್ರಯಾಣ ಟಿಕೆಟ್ ಪರೀಕ್ಷಕರ (TTE) ದೂರಿನ ಅನ್ವಯ ಸರ್ಕಾರಿ ರೈಲ್ವೆ ಪೊಲೀಸರು (GRP) ಅಟೆಂಡೆಂಟ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 103(1) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಆರೋಪಿ ಅಟೆಂಡೆಂಟ್ ಜುಬೇರ್ ಮೆಮನ್ ಎಂಬವರನ್ನು ಬಂಧಿಸಲಾಗಿದ್ದು, ಹತ್ಯೆಗೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಜುಬೇರ್ ಗುತ್ತಿಗೆದಾರರ ಮೂಲಕ ನೇಮಕಗೊಂಡಿದ್ದ ಉದ್ಯೋಗಿಯಾಗಿದ್ದು, ಘಟನೆಯ ನಂತರ ಆತನನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಧ್ಯಪ್ರವೇಶ
ಸಹ್ಯಾದ್ರಿ ರೈಟ್ಸ್ ಫೋರಂ ಎಂಬ ಸರ್ಕಾರೇತರ ಸಂಸ್ಥೆ ನೀಡಿದ ದೂರಿನನ್ವಯ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ರೈಲ್ವೆ ಸಂರಕ್ಷಣಾ ದಳದ (RPF) ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ. ದೂರಿನಲ್ಲಿನ ಆರೋಪಗಳು ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಸೂಚಿಸುತ್ತವೆ ಎಂದು ಆಯೋಗ ಹೇಳಿದೆ. ಆರೋಪಿ ಕೋಚ್ ಅಟೆಂಡೆಂಟ್‌ನ ನೇಮಕಾತಿ ಪ್ರಕ್ರಿಯೆ, ಅರ್ಹತೆ, ತರಬೇತಿ ಮತ್ತು ಪೊಲೀಸ್ ಪರಿಶೀಲನೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ರೈಲ್ವೆ ಇಲಾಖೆಗೆ ಸೂಚಿಸಲಾಗಿದೆ. ಈ ಕುರಿತು ಎರಡು ವಾರಗಳಲ್ಲಿ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸುವಂತೆ ರೈಲ್ವೆ ಮಂಡಳಿ ಮತ್ತು ಆರ್‌ಪಿಎಫ್‌ಗೆ ನಿರ್ದೇಶನ ನೀಡಲಾಗಿದೆ.
ಇದನ್ನೂ ಓದಿ: ಉತ್ತರ ಕನ್ನಡ | ಕಟ್ಟಡ ಕಾಮಗಾರಿ ವೇಳೆ ಲಿಫ್ಟ್ ಕುಸಿದು ಇಬ್ಬರು ಕಾರ್ಮಿಕರು ಸಾವು!


















