ಮಂಗಳೂರು : ಮೂರುವರೆ ವರ್ಷದ ತನ್ನ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ತಂದೆಯ ವಿರುದ್ಧದ ಆರೋಪ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿಐಐ)ದಲ್ಲಿ ಸಾಬೀತಾಗಿದೆ. ಆದರೆ, ಸದ್ಯ ಶಿಕ್ಷೆ ಪ್ರಮಾಣವನ್ನು ಕಾಯ್ದಿರಿಸಲಾಗಿದೆ.
ಮೂಲತಃ ರಾಣಿಬೆನ್ನೂರು ಬೈಲೂರು ನಿವಾಸಿ, ಪ್ರಸಕ್ತ ಬಜೆ ನಿವಾಸಿ 34 ವರ್ಷದ ಪ್ರಾಯದ ಮಗುವಿನ ತಂದೆಯೇ ಆರೋಪಿಯಾಗಿದ್ದಾನೆ.
2024ರ ಡಿ.18ರಂದು ಬೆಳಗ್ಗೆ 6ಕ್ಕೆ ಮಗುವಿನ ತಾಯಿ ಕೆಲಸಕ್ಕೆ ತೆರಳಿದ್ದು, ಈ ಸಂದರ್ಭ 3.5 ವರ್ಷದ ಪ್ರಾಯದ ಮಗುವನ್ನು ತನ್ನ ತಂಗಿಯ ಮನೆಯಲ್ಲಿ ಬಿಟ್ಟು ಹೋಗಿದ್ದರು. ಮಧ್ಯಾಹ್ನ 3:30ರ ವೇಳೆಗೆ ಮಗುವಿನ ತಾಯಿಯ ತಂಗಿ ತನ್ನ ಮಗುವನ್ನು ಶಾಲೆಯಿಂದ ಕರೆದುಕೊಂಡು ಬರಲು ಹೊರಗೆ ಹೋಗುವಾಗ ಮಗುವನ್ನು ಪಕ್ಕದ ಮತ್ತೊಂದು ಮನೆಯಲ್ಲಿ ಕುಳ್ಳಿರಿಸಿ ಹೋಗಿದ್ದರು. ಈ ಸಂದರ್ಭ ಆರೋಪಿಯು ತನ್ನ ಮಗುವನ್ನು ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ತಿಳಿದುಬಂದಿದೆ. ರಾತ್ರಿ ಮನೆಗೆ ಬಂದಾಗ ತಾಯಿ ಮಗುವಿನ ಗುಪ್ತಾಂಗದ ಮೇಲೆ ಗಾಯ ನೋಡಿ ಮಗುವಿನ ಬಳಿ ಕೇಳಿದಾಗ ಮಗು ನಡೆದ ವಿಷಯವನ್ನು ತಿಳಿಸಿತ್ತು. ಮರುದಿನ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಿದಾಗ ಕೃತ್ಯ ಬಯಲಾಗಿತ್ತು. ಈ ಬಗ್ಗೆ ಬಜ್ಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್. ಮಾನು ವಿಚಾರಣೆ ನಡೆಸಿ, ಪೊಕ್ಸ್ ಕಲಂ 10ರಡಿ ಆರೋಪ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಶಿಕ್ಷೆ ಪ್ರಮಾಣವನ್ನು ಆ.28ಕ್ಕೆ ಕಾಯ್ದಿರಿಸಲಾಗಿದೆ. ಬಜ್ಪೆ ಠಾಣೆಯ ಹಿಂದಿನ ಇನ್‌ಸ್ಪೆಕ್ಟರ್ ಸಂದೀಪ್ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸಹನಾ ದೇವಿ ವಾದ ಮಂಡಿಸಿದ್ದರು.



















