ಚಿತ್ರದುರ್ಗ: ಜೈಲಿನಲ್ಲಿ ನಟ ದರ್ಶನ್ ಗೆ (Actor Darshan) ರಾಜಾತಿಥ್ಯ ಸಿಗುತ್ತಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದ್ದು, ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಕಣ್ಣೀರು ಸುರಿಸಿದ್ದಾರೆ.
ನಮಗೆ ಪೊಲೀಸರು ಹಾಗೂ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಆ ನಂಬಿಕೆ ಉಳಿಸಿಕೊಳ್ಳಬೇಕು. ಜೈಲು ಜೈಲಾಗಿರಬೇಕೇ ಹೊರತು, ರೆಸಾರ್ಟ್ ಆಗಬಾರದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆಯಾಗಲಿ. ಪ್ರಕರಣವನ್ನು ಸಿಬಿಐ ತನಿಖೆಗೆ ಕೊಟ್ಟಿದ್ದರೆ ವಾಸಿ ಎಂದು ಈಗ ನನಗೆ ಅನಿಸುತ್ತಿದೆ. ಇದನ್ನು ನೋಡಿ ನಮಗೆ ಶಾಕ್ ಆಯ್ತು, ಈ ಬಗ್ಗೆಯೂ ಸಮಗ್ರವಾಗಿ ತನಿಖೆ ಆಗಲಿ. ಎಲ್ಲಿ ತಪ್ಪು ನಡೆದರೂ ಅದರ ಪರಿಶೀಲನೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾರ್ಜ್ ಶೀಟ್ ಹಾಕಿದ ಮೇಲೆ ಎಲ್ಲವೂ ತಿಳಿಯಲಿದೆ. ನ್ಯಾಯಾಧೀಶರು ತಪ್ಪಿತಸ್ಥರಿಗೆ ಶಿಕ್ಷೆ ನೀಡುತ್ತಾರೆ ಎಂಬ ನಂಬಿಕೆ ಇದೆ. ಆ ನಂಬಿಕೆ ಉಳಿಸಿಕೊಳ್ಳಬೇಕು. ಫೋಟೊ ನೋಡಿದರೆ ಅತನಿಗೆ, ತಪ್ಪು ಮಾಡಿದ್ದೇನೆ ಎಂಬ ಭಾವನೆಯೇ ಇಲ್ಲದಂತೆ ಕಂಡು ಬಂದಿದೆ. ಇದು ನನಗೆ ತೀವ್ರ ಆಶ್ಚರ್ಯಕ್ಕೆ ಕಾರಣವಾಗಿದೆ. ಕುರ್ಚಿ ಮೇಲೆ ಕುಳಿತು ಚಹ , ಸಿಗರೇಟ್ ಹಿಡಿದು ರೆಸಾರ್ಟ್ ನಲ್ಲಿ ಕುಳಿತಂತೆ ಕುಳಿತಿದ್ದಾರೆ. ಸಿಎಂ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದಿದ್ದಾರೆ. ಪೊಲೀಸರ ಮೇಲೆಯೂ ನಮಗೆ ಪೂರ್ಣ ನಂಬಿಕೆ ಇದೆ. ಈ ಕುರಿತು ನಿರ್ದಾಕ್ಷಿಣ್ಯ ತನಿಖೆ ನಡೆಯಬೇಕು ಎಂದು ಹೇಳಿದ್ದಾರೆ.
ತಪ್ಪಿತಸ್ಥಿರಿಗೆ ಶಿಕ್ಷೆಯಾಗಿ, ನನ್ನ ಮಗನ ಆತ್ಮಕ್ಕೆ ಶಾಂತಿ ಸಿಗಬೇಕು. ನ್ನ ಮಗನ ಸಾವಿಗೆ ಇಡೀ ರಾಜ್ಯ ದುಃಖ ಪಟ್ಟಿದೆ. ಗೃಹ ಸಚಿವರು ಕೂಡ ಈ ಬಗ್ಗೆ ಗಮನ ಹರಿಸಬೇಕು. ನಮ್ಮ ಮನೆಯವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದೇವೆ ಎಂದು ಮನವಿ ಮಾಡಿದ್ದಾರೆ.