ನವದೆಹಲಿ: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ನಟ ದರ್ಶನ್‌ಗೆ ಮರಳಿ ಜೈಲಾಗುತ್ತೋ ಅಥವಾ ಜಾಮೀನು ಸಿಗುತ್ತೋ ಎನ್ನುವ ವಿಚಾರ ಮತ್ತೆ ಕುತೂಹಲವಾಗಿಯೇ ಉಳಿದಿದೆ. ಇಂದು ಸುಪ್ರೀಂ ಕೋರ್ಟ್ ನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದಿದ್ದು, ಒಂದು ವಾರದಲ್ಲಿ ಆದೇಶ ಪ್ರಕಟಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ರಾಜ್ಯ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನಿಂದು ನ್ಯಾ.ಪಾರ್ದಿವಾಲಾ ನೇತೃತ್ವದ ದ್ವಿಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತ್ತು. ಹೈಕೋರ್ಟ್ ರೀತಿ ತರಾತುರಿಯಲ್ಲಿ ಆದೇಶ ನೀಡುವುದಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್ ನ್ಯಾಯಪೀಠ ಒಂದು ವಾರದಲ್ಲಿ ಆದೇಶ ಪ್ರಕಟಿಸುವುದಾಗಿ ಹೇಳಿದೆ.
ಸುಮಾರು ಒಂದೂವರೆ ಗಂಟೆಗಳ ಕಾಲ ವಾದ-ಪ್ರತಿವಾದ ಆಲಿಸಿ, ಕೊನೆಯಲ್ಲಿ ಇತರೇ ಆರೋಪಿಗಳ ಪರ ವಕೀಲರ ಮಾಹಿತಿ ಕೇಳಿದೆ. ಎಲ್ಲಾ ಆರೋಪಿಗಳ ಪರ ವಕೀಲರು ಲಿಖಿತ ವಾದ ಮಂಡಿಸಬಹುದು. ಇಂದಿನಿಂದ ಒಂದು ವಾರದಲ್ಲಿ ಮೂರು ಪುಟಗಳ ವಾದಾಂಶವನ್ನು ಲಿಖಿತ ರೂಪದಲ್ಲಿ ಸಲ್ಲಿಸಬೇಕು. ಬಳಿಕ ಆದೇಶ ನೀಡುವುದಾಗಿ ಸುಪ್ರೀಂ ಹೇಳಿದೆ.
ದರ್ಶನ್ ಪರ ಹಿರಿಯ ವಕೀಲ ಸಿದ್ಧಾರ್ಥ್ ದವೆ ವಾದ ಮಂಡಿಸಿದರು, ಸರ್ಕಾರಿ ವಕೀಲರಾಗಿ ಸಿದ್ಧಾರ್ಥ ಲೂಥ್ರಾ ಪ್ರಬಲ ವಾದ ಮಂಡಿಸಿದರು.