ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಸದ್ಯದಲ್ಲಿಯೇ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ ಎಂದು ಬೆಂಗಳೂರು ಪೊಲೀಸ್ ಕಮೀಶನರ್ ಬಿ ದಯಾನಂದ ಹೇಳಿದ್ದಾರೆ.
ಶುಕ್ರವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌಖಿಕ, ಸಾಂಧರ್ಭಿಕ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಅವುಗಳನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈಗಾಗಲೇ ತನಿಖೆಯ ಭಾಗವಾಗಿ ವಿಧಿ ವಿಜ್ಞಾನ ಕಚೇರಿಯಿಂದ ಶೇ. 70ರಷ್ಟು ವರದಿಗಳು ಕೈ ಸೇರಿವೆ ಎಂದು ಹೇಳಿದ್ದಾರೆ.
ಗ್ಯಾಜೆಟ್ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳ ಸಾಕ್ಷ್ಯಗಳನ್ನು ಹೈದರಾಬಾದ್ ಎಫ್ ಎಸ್ ಎಲ್ ಗೆ ಕಳುಹಿಸಲಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ವರದಿಗಳು ನಮ್ಮ ಕೈ ಸೇರಲಿವೆ. ಎಲ್ಲ ವರದಿಗಳು ಒಂದುಗೂಡಿದ ಬಳಿಕ ಮತ್ತೊಮ್ಮೆ ಸಾಕ್ಷಿಗಳಿಂದ ಸ್ಪಷ್ಟೀಕರಣ ಪಡೆಯಲಾಗುವುದು. ಆನಂತರ ಪ್ರಕರಣದ ಅಂತಿಮ ವರದಿ ಅಥವಾ ಚಾರ್ಜ್ ಶೀಟ್ ನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಸದ್ಯದ ವರದಿಗಳಂತೆ ದರ್ಶನ್ ಆಂಡ್ ಗ್ಯಾಂಗ್ ಗೆ ಸಂಕಷ್ಟ ತಪ್ಪಿದ್ದಲ್ಲ ಎನ್ನಲಾಗುತ್ತಿದೆ. ಏಕೆಂದರೆ, ವರದಿಗಳೆಲ್ಲವೂ ಪೂರಕವಾಗಿದ್ದು, ದರ್ಶನ್ ಆಂಡ್ ಗ್ಯಾಂಗ್ ನ ಕೃತ್ಯದಿಂದಲೇ ಸಾವನ್ನಪ್ಪಿರುವುದು ಬಹಿರಂಗ ಮಾಡುತ್ತಿವೆ. ಹೀಗಾಗಿ ದರ್ಶನ್ ಆಂಡ್ ಟೀಂಗೆ ಕಾನೂನಿನ ಸಂಕಷ್ಟ ಎದುರಾಗುವುದರಲ್ಲಿ ಎರಡು ಮಾಡಿಲ್ಲ ಎನ್ನಲಾಗುತ್ತಿದೆ.