ಬೆಂಗಳೂರು: ಷೇರು ಮಾರುಕಟ್ಟೆ ದಿನೇದಿನೆ ಕುಸಿತ ಕಾಣುತ್ತಿದೆ. ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ಹೂಡಿಕೆ ಮಾಡಿದವರಿಗೂ ನಷ್ಟವಾಗುತ್ತದೆ. ಚಿನ್ನದ ಮೇಲೆ ಹೂಡಿಕೆ ಮಾಡೋಣ ಎಂದರೆ, ಚಿನ್ನದ ಬೆಲೆ ಈಗ ಗಗನಕ್ಕೆ ಏರಿದೆ. ಇದರ ಮಧ್ಯೆಯೇ, ರಿಯಲ್ ಎಸ್ಟೇಟ್ ಎಂದರೆ ತುಂಬ ಜನರಿಗೆ, “ಅದೇನಿದ್ದರೂ ಶ್ರೀಮಂತರಿಗೆ ಮಾತ್ರ” ಎನ್ನುತ್ತಾರೆ. ಆದರೆ, ರಿಯಲ್ ಎಸ್ಟೇಟ್ ಇನ್ವೆಸ್ಟ್ ಮೆಂಟ್ ಟ್ರಸ್ಟ್ (REIT Investment) ಹೂಡಿಕೆ ಮೂಲಕ ಸಣ್ಣ ಮೊತ್ತವನ್ನೂ ಈಗ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಬಹುದಾಗಿದೆ.
ಬೆಂಗಳೂರು ಸೇರಿ ರಾಜ್ಯದ ಯಾವುದೇ ಮಹಾ ನಗರಗಳಲ್ಲಿ ಹೂಡಿಕೆ ದೃಷ್ಟಿಯಿಂದ ಸೈಟ್ ತೆಗೆದುಕೊಳ್ಳುತ್ತೇನೆ. ಮನೆ ಕಟ್ಟಿ ಬಾಡಿಗೆ ಬಿಡುತ್ತೇನೆ ಎಂದರೆ ಕಷ್ಟ ಸಾಧ್ಯ. ಆದರೆ, ಆರ್ ಇಐಟಿಯಲ್ಲಿ ಕನಿಷ್ಠ 400 ರೂ.ನಿಂದ 500 ರೂಪಾಯಿಯನ್ನು ಕೂಡ ಹೂಡಿಕೆ ಮಾಡಬಹುದಾಗಿದೆ. ಅಮೆರಿಕದಲ್ಲಿ ಈ ಮಾದರಿಯ ಹೂಡಿಕೆ 1960ರಿಂದಲೇ ಚಾಲ್ತಿಯಲ್ಲಿ ಇದೆ. ಭಾರತಕ್ಕೆ ಈ ಮಾದರಿಯ ಹೂಡಿಕೆ ಬಂದು ಸುಮಾರು ಹತ್ತು ವರ್ಷಗಳಾಗಿವೆ.
ಮ್ಯೂಚುವಲ್ ಫಂಡ್ ಗೆ ಸಾಮ್ಯತೆ ಇದೆ
ಮ್ಯೂಚುವಲ್ ಫಂಡ್ ಹೂಡಿಕೆ ಮತ್ತು ರಿಯಲ್ ಎಸ್ಟೇಟ್ ಇನ್ವೆಸ್ಟ್ ಮೆಂಟ್ ಟ್ರಸ್ಟ್ ಹೂಡಿಕೆಗಳ ನಡುವೆ ಸಾಮ್ಯತೆ ಇದೆ. ಮ್ಯೂಚುವಲ್ ಫಂಡ್ಗಳಲ್ಲಿ ಎಸ್ಐಪಿ ಮೂಲಕ ಹೂಡಿಕೆ ಮಾಡುವಾಗ ಪ್ರತಿ ತಿಂಗಳು 500, 1,000, 10,000 ರೂ. ಸೇರಿ ನಮ್ಮ ಶಕ್ತಿಗೆ ಅನುಗುಣವಾಗಿ ಹಣ ತೊಡಗಿಸುತ್ತೇವೆ. ಆ ಹಣವನ್ನು ಯಾವ ಷೇರುಗಳಲ್ಲಿ ತೊಡಗಿಸಿ ನಿರ್ವಹಣೆ ಮಾಡಬೇಕು ಎನ್ನುವುದನ್ನು ಫಂಡ್ ಮ್ಯಾನೇಜರ್ ನಿರ್ಧರಿಸುತ್ತಾರೆ. ಬಂದ ಲಾಭಕ್ಕೆ ನಿಗದಿತ ಕಮಿಷನ್ ಪಡೆದು ಉಳಿದ ಹಣವನ್ನು ಹೂಡಿಕೆದಾರನಿಗೆ ಮ್ಯೂಚುವಲ್ ಫಂಡ್ ಕಂಪನಿಯವರು ನೀಡುತ್ತಾರೆ.
ಹೂಡಿಕೆ ಮಾಡುವುದು ಹೇಗೆ?
ಇದೇ ರೀತಿ ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್ ನಲ್ಲಿ ಹೂಡಿಕೆ ಮಾಡಬಹುದು. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಆರ್ಇಐಟಿಗಳಲ್ಲಿ ಐದು ಸಾವಿರ, ಹತ್ತು ಸಾವಿರ ರೂ. ಸೇರಿ ಶಕ್ತಿಗೆ ಅನುಗುಣವಾಗಿ ಹೂಡಿಕೆ ಮಾಡಬಹುದಾಗಿದೆ. ಈ ಹೂಡಿಕೆಯ ಮಾದರಿಯಲ್ಲಿ ಶೇ.8-10ರಷ್ಟು ರಿಟರ್ನ್ಸ್ ಪಡೆಯಬಹುದಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಆರ್ಇಐಟಿ ಮಾರುಕಟ್ಟೆ ಬೆಲೆಯಲ್ಲಿ ಆಗುವ ಸಂಭಾವ್ಯ ಹೆಚ್ಚಳದ ಲಾಭ ಪಡೆಯಬಹುದು. ಆರ್ಇಐಟಿಗಳು ಹಣವನ್ನು ವಾಣಿಜ್ಯ ಉದ್ದೇಶದ ರಿಯಲ್ ಎಸ್ಟೇಟ್ ಗಳಲ್ಲಿ ಹೂಡಿಕೆ ಮಾಡಿ ಅದರಿಂದ ಬಂದ ಲಾಭವನ್ನು ಹೂಡಿಕೆದಾರರಿಗೆ ಹಂಚಿಕೆ ಮಾಡುತ್ತವೆ. ಇಲ್ಲಿ ಹೂಡಿಕೆ ಮಾಡುವವರಿಗೆ ಸ್ವತ್ತಿನ ಭಾಗಶಃ ಮಾಲೀಕತ್ವ ಸಿಗುತ್ತದೆ.
ಇದು ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ (ಸೆಬಿ) ನಿಯಂತ್ರಣದ ವ್ಯಾಪ್ತಿಗೆ ಬರುತ್ತದೆ. ಭಾರತದಲ್ಲಿ ಈಗಷ್ಟೇ ಆರ್ ಇಐಟಿಗಳು ಮುನ್ನೆಲೆಗೆ ಬರುತ್ತಿವೆ. ಎಂಬೆಸಿ ಆಫೀಸ್ ಪಾರ್ಕ್ಸ್ ಆರ್ ಇಐಟಿ, ಮೈಂಡ್ ಸ್ಪೇಸ್ ಬಿಸಿನೆಸ್ ಪಾರ್ಕ್ ಆರ್ ಇಐಟಿ, ಬ್ರೂಕ್ ಫೀಲ್ಡ್ ಇಂಡಿಯಾ ರಿಯಲ್ ಎಸ್ಟೇಟ್ ಟ್ರಸ್ಟ್ ಆರ್ ಇಐಟಿ ಸೇರಿ ಹಲವು ಕಂಪನಿಗಳು ಹೂಡಿಕೆಗೆ ಮುಕ್ತವಾಗಿವೆ.
ಗಮನಿಸಿ: ರಿಯಲ್ ಎಸ್ಟೇಟ್ ಇನ್ವೆಸ್ಟ್ ಮೆಂಟ್ ಟ್ರಸ್ಟ್ ಹೂಡಿಕೆ ಕುರಿತು ನಾವು ನೀಡಿರುವುದು ಮಾಹಿತಿ ಮಾತ್ರ. ಇಲ್ಲಿರುವ ಕಂಪನಿಗಳ ಹೆಸರು ಉದಾಹರಣೆಗಾಗಿ ನೀಡಲಾಗಿದೆಯೇ ಹೊರತು, ಹೂಡಿಕೆಗೆ ಶಿಫಾರಸು ಅಲ್ಲ. ಹೂಡಿಕೆ ಮಾಡುವ ಆರ್ಥಿಕ ತಜ್ಞರ ಸಲಹೆಗಳನ್ನು ಪಡೆದೇ ಮುಂದಿನ ನಿರ್ಧಾರ ತೆಗೆದುಕೊಳ್ಳುವುದು ಅತ್ಯವಶ್ಯಕ. ಮಾಹಿತಿ ದೃಷ್ಟಿಯಿಂದ ಯೋಜನೆ ಕುರಿತು ವಿವರಣೆ ನೀಡಲಾಗಿದೆ ಅಷ್ಟೆ.