ಬೆಂಗಳೂರು: ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಶವೋಮಿ ಸಂಸ್ಥೆಯ ಸಬ್-ಬ್ರಾಂಡ್ ರೆಡ್‌ಮಿ, ತನ್ನ ಬಹುನಿರೀಕ್ಷಿತ ‘ರೆಡ್‌ಮಿ ನೋಟ್ 15 ಪ್ರೊ’ ಸರಣಿಯನ್ನು ಬಿಡುಗಡೆ ಮಾಡಲು ದಿನಾಂಕವನ್ನು ನಿಗದಿಪಡಿಸಿದೆ. ಜನವರಿ 29 ರಂದು ಈ ಹೊಸ ಸ್ಮಾರ್ಟ್‌ಫೋನ್ ಸರಣಿಯು ದೇಶೀಯ ಮಾರುಕಟ್ಟೆಗೆ ಅಧಿಕೃತವಾಗಿ ಪ್ರವೇಶ ಪಡೆಯಲಿದೆ ಎಂದು ಕಂಪನಿ ಗುರುವಾರ ಘೋಷಿಸಿದೆ. ಈಗಾಗಲೇ ಈ ಸರಣಿಗಾಗಿ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮೈಕ್ರೋಸೈಟ್ ಲೈವ್ ಆಗಿದ್ದು, ಫೋನಿನ ವಿನ್ಯಾಸ ಮತ್ತು ಪ್ರಮುಖ ಫೀಚರ್‌ಗಳ ಬಗ್ಗೆ ಕುತೂಹಲಕಾರಿ ಮಾಹಿತಿಗಳು ಹೊರಬಿದ್ದಿವೆ.
ಈ ಸರಣಿಯ ಪ್ರಮುಖ ಆಕರ್ಷಣೆಯೆಂದರೆ ಅದರ ಅತ್ಯಾಧುನಿಕ ಕ್ಯಾಮೆರಾ ವ್ಯವಸ್ಥೆ. ರೆಡ್‌ಮಿ ನೋಟ್ 15 ಪ್ರೊ 5G ಫೋನ್ 200 ಮೆಗಾಪಿಕ್ಸೆಲ್‌ನ ‘ಮಾಸ್ಟರ್ ಪಿಕ್ಸೆಲ್’ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರಲಿದ್ದು, ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ತಂತ್ರಜ್ಞಾನವನ್ನು ಒಳಗೊಂಡಿದೆ. ಇದರೊಂದಿಗೆ HDR+ ಮತ್ತು AI ಇಮೇಜ್ ಎಂಜಿನ್ ಸೌಲಭ್ಯವಿದ್ದು, ಬಳಕೆದಾರರು 4K ಗುಣಮಟ್ಟದ ವಿಡಿಯೋಗಳನ್ನು ಸುಲಭವಾಗಿ ಚಿತ್ರೀಕರಿಸಬಹುದಾಗಿದೆ. ಹಿಂಭಾಗದಲ್ಲಿ ಸ್ಕ್ವಿರ್ಕಲ್ (Squircle) ಮಾದರಿಯ ಕ್ಯಾಮೆರಾ ಮಾಡ್ಯೂಲ್ ಈ ಫೋನ್‌ಗೆ ಪ್ರೀಮಿಯಂ ಲುಕ್ ನೀಡಲಿದೆ.
ಚಿಪ್ ಸೆಟ್ ಯಾವುದು?
ಕಾರ್ಯಕ್ಷಮತೆಯ ದೃಷ್ಟಿಯಿಂದ ನೋಡುವುದಾದರೆ, ಇದರಲ್ಲಿ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7s ಜೆನ್ 4 ಚಿಪ್‌ಸೆಟ್ ಬಳಸಲಾಗಿದ್ದು, ಇದು 4nm ಪ್ರೊಸೆಸರ್ ತಂತ್ರಜ್ಞಾನವನ್ನು ಹೊಂದಿದೆ. ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್ ಸಮಯದಲ್ಲಿ ಫೋನ್ ಕಾಯದಂತೆ ತಡೆಯಲು ‘ಐಸ್‌ಲೂಪ್ ಕೂಲಿಂಗ್’ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇನ್ನು ಡಿಸ್‌ಪ್ಲೇ ವಿಷಯದಲ್ಲಿ 6.83 ಇಂಚಿನ 1.5K ಅಮೋಲೆಡ್ ಪರದೆಯಿದ್ದು, ಇದು 120Hz ರಿಫ್ರೆಶ್ ರೇಟ್ ಮತ್ತು 3,200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ನೀಡುತ್ತದೆ. ಪರದೆಯ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಬಳಸಲಾಗಿದೆ.
ಬ್ಯಾಟರಿ ಸಾಮರ್ಥ್ಯದಲ್ಲೂ ಈ ಫೋನ್ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ. 6,500mAh ಸಾಮರ್ಥ್ಯದ ಸಿಲಿಕಾನ್ ಕಾರ್ಬನ್ ಬ್ಯಾಟರಿಯನ್ನು ಈ ಸರಣಿಯಲ್ಲಿ ಅಳವಡಿಸಲಾಗಿದ್ದು, ಇದು ಐದು ವರ್ಷಗಳ ದೀರ್ಘ ಬಾಳಿಕೆಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದಕ್ಕೆ ಪೂರಕವಾಗಿ 100W ಹೈಪರ್‌ಚಾರ್ಜ್ ವೇಗದ ವೈರ್ಡ್ ಚಾರ್ಜಿಂಗ್ ಸೌಲಭ್ಯವಿದ್ದು, ತುರ್ತು ಸಮಯದಲ್ಲಿ ಇತರ ಡಿವೈಸ್‌ಗಳನ್ನು ಚಾರ್ಜ್ ಮಾಡಲು 22.5W ರಿವರ್ಸ್ ಚಾರ್ಜಿಂಗ್ ಫೀಚರ್ ಕೂಡ ಲಭ್ಯವಿದೆ. ಧೂಳು ಮತ್ತು ನೀರಿನಿಂದ ರಕ್ಷಣೆ ಪಡೆಯಲು ಈ ಫೋನ್ ಅತ್ಯುನ್ನತ IP69K ರೇಟಿಂಗ್ ಹೊಂದಿದ್ದು, ರೆಡ್‌ಮಿ ಟೈಟಾನ್ ಸ್ಟ್ರಕ್ಚರ್‌ನಿಂದಾಗಿ ಬಲಿಷ್ಠ ಬಾಳಿಕೆಯನ್ನು ಭರವಸೆ ನೀಡುತ್ತದೆ.
ಬ್ರೌನ್ ಮತ್ತು ಗ್ರೇ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಈ ಫೋನ್ ಬಿಡುಗಡೆಯಾಗಲಿದೆ. ಪೋಲೆಂಡ್‌ನಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಈ ಫೋನ್‌ನ ಆರಂಭಿಕ ಬೆಲೆ ಅಂದಾಜು 42,000 ರೂಪಾಯಿಗಳ ಆಸುಪಾಸಿನಲ್ಲಿದೆ. ಭಾರತೀಯ ಮಾರುಕಟ್ಟೆಯ ಬೆಲೆಯ ಕುರಿತು ಕಂಪನಿಯು ಜನವರಿ 29 ರಂದು ನಡೆಯಲಿರುವ ಅಧಿಕೃತ ಸಮಾರಂಭದಲ್ಲಿ ಮಾಹಿತಿ ನೀಡಲಿದ್ದು, ಗ್ರಾಹಕರು ಈ ಹೊಸ ಸರಣಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ : ಗಣರಾಜ್ಯೋತ್ಸವದ ಸಂಭ್ರಮಕ್ಕೆ ಮಹೀಂದ್ರಾ ಮೆರುಗು | ರೈತರಿಗಾಗಿ ಬಿಡುಗಡೆಯಾಯ್ತು ತ್ರಿವರ್ಣದ ಸೀಮಿತ ಆವೃತ್ತಿಯ ಟ್ರ್ಯಾಕ್ಟರ್‌ಗಳು!



















