ಇಸ್ಲಾಮಾಬಾದ್: ಆರ್ಥಿಕ ಸಂಕಷ್ಟ ಮತ್ತು ಆಂತರಿಕ ಭದ್ರತಾ ವೈಫಲ್ಯಗಳಿಂದ ತತ್ತರಿಸಿರುವ ಪಾಕಿಸ್ತಾನ, ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಇದೀಗ ಮತ್ತೆ ಯುದ್ಧದ ವರಾತ ತೆಗೆದಿದೆ. ಇಸ್ಲಾಮಾಬಾದ್‌ನಲ್ಲಿ ನಡೆದ ಭೀಕರ ಆತ್ಮಾಹುತಿ ದಾಳಿಯ ಬೆನ್ನಲ್ಲೇ, ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, “ಭಾರತ ಮತ್ತು ಅಫ್ಘಾನಿಸ್ತಾನದೊಂದಿಗೆ ಏಕಕಾಲದಲ್ಲಿ ಎರಡು ರಂಗಗಳಲ್ಲಿ ಯುದ್ಧ ಮಾಡಲು ನಾವು ಸಿದ್ಧರಿದ್ದೇವೆ” ಎಂದು ಘೋಷಿಸುವ ಮೂಲಕ, ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಮಂಗಳವಾರ ಇಸ್ಲಾಮಾಬಾದ್‌ನ ಕೋರ್ಟ್ ಆವರಣದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 12 ಮಂದಿ ಮೃತಪಟ್ಟು, 36ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ದಾಳಿಯ ಹೊಣೆಯನ್ನು ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಹೊತ್ತುಕೊಂಡಿದೆ. ಈ ಘಟನೆಯ ನಂತರ ಮಾತನಾಡಿದ ಖ್ವಾಜಾ ಆಸಿಫ್, “ನಾವು ಪೂರ್ವ ಗಡಿಯಲ್ಲಿ ಭಾರತ ಮತ್ತು ಪಶ್ಚಿಮ ಗಡಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ಯುದ್ಧಕ್ಕೆ ಸಿದ್ಧರಿದ್ದೇವೆ. ಮೊದಲ ಸುತ್ತಿನಲ್ಲಿ ಅಲ್ಲಾಹ್ ನಮಗೆ ಸಹಾಯ ಮಾಡಿದ್ದ, ಎರಡನೇ ಸುತ್ತಿನಲ್ಲೂ ಅವನೇ ಸಹಾಯ ಮಾಡುತ್ತಾನೆ” ಎಂದು ಹೇಳಿದ್ದಾರೆ.
ಇಸ್ಲಾಮಾಬಾದ್ ದಾಳಿಯು ಅಫ್ಘಾನ್ ತಾಲಿಬಾನ್ “ಕಾಬೂಲ್‌ನಿಂದ ಕಳುಹಿಸಿದ ಸಂದೇಶ” ಎಂದು ಆಸಿಫ್ ಆರೋಪಿಸಿದ್ದಾರೆ. ಆದರೆ, ಇದೇ ಘಟನೆಗೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರತದ ವಿರುದ್ಧ ಗೂಬೆ ಕೂರಿಸಿದ್ದು, “ಇದು ಭಾರತದ ಬೆಂಬಲಿತ ಗುಂಪುಗಳು ನಡೆಸಿದ ದಾಳಿ” ಎಂದು ಆರೋಪಿಸಿದ್ದಾರೆ. ಈ ದ್ವಂದ್ವದ ಹೇಳಿಕೆಗಳು ಪಾಕಿಸ್ತಾನದ ಆಡಳಿತದಲ್ಲಿನ ಗೊಂದಲವನ್ನು ಎತ್ತಿ ತೋರಿಸಿದೆ.
ದೆಹಲಿ ಸ್ಫೋಟವನ್ನು ಲೇವಡಿ ಮಾಡಿದ್ದ ಆಸಿಫ್
ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟದಲ್ಲಿ 13 ಮಂದಿ ಮೃತಪಟ್ಟಾಗ, ಖ್ವಾಜಾ ಆಸಿಫ್ ಅದನ್ನು “ಕೇವಲ ಗ್ಯಾಸ್ ಸಿಲಿಂಡರ್ ಸ್ಫೋಟ” ಎಂದು ಲೇವಡಿ ಮಾಡಿದ್ದರು. “ಭಾರತ ಈ ಘಟನೆಯನ್ನು ರಾಜಕೀಯಗೊಳಿಸುತ್ತಿದ್ದು, ಶೀಘ್ರದಲ್ಲೇ ಇದರ ಹೊಣೆಯನ್ನು ಪಾಕಿಸ್ತಾನದ ಮೇಲೆ ಹೊರಿಸಬಹುದು” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಭಾರತೀಯ ಅಧಿಕಾರಿಗಳು ಆಸಿಫ್ ಅವರ ಹೇಳಿಕೆಗಳನ್ನು “ಗಮನವನ್ನು ಬೇರೆಡೆಗೆ ಸೆಳೆಯುವ ಹತಾಶ ಪ್ರಯತ್ನ” ಎಂದು ತಳ್ಳಿಹಾಕಿದ್ದಾರೆ. ದೆಹಲಿ ಸ್ಫೋಟದಲ್ಲಿ ಸೇನಾ ದರ್ಜೆಯ ಸ್ಫೋಟಕಗಳು ಬಳಕೆಯಾಗಿರುವ ವರದಿಗಳಿಂದ “ಇಸ್ಲಾಮಾಬಾದ್‌ಗೆ ಆತಂಕ ಶುರುವಾಗಿದೆ” ಎಂದು ಹಿರಿಯ ಭದ್ರತಾ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ‘ನಿಮಗೆಷ್ಟು ಪತ್ನಿಯರು?’ : ಶ್ವೇತಭವನದಲ್ಲಿ ಸಿರಿಯಾ ಅಧ್ಯಕ್ಷರಿಗೆ ಟ್ರಂಪ್ ವಿಚಿತ್ರ ಪ್ರಶ್ನೆ!


















