ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ನಾಯಕ ಹಾಗೂ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಅವರು ಮುಂಬೈ ಇಂಡಿಯನ್ಸ್ (MI) ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಪಂದ್ಯದಲ್ಲಿ ಮತ್ತೊಂದು ವಿಶೇಷ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಆರ್‌ಸಿಬಿ ಪರ ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ, ಸ್ಫೋಟಕ ಅರ್ಧಶತಕ ಬಾರಿಸುವ ಮೂಲಕ ಮಿಂಚಿದರು. ಕೇವಲ 38 ಎಸೆತಗಳನ್ನು ಎದುರಿಸಿದ ಅವರು 50 ರನ್‌ಗಳನ್ನು ಸಿಡಿಸಿದರು. ಈ ಆಕರ್ಷಕ ಇನ್ನಿಂಗ್ಸ್‌ನೊಂದಿಗೆ ಅವರು ಐಪಿಎಲ್ ಟೂರ್ನಿಯಲ್ಲಿ ಐದು ಬಾರಿ ಚಾಂಪಿಯನ್ಸ್ ಆಗಿರುವ ಮುಂಬೈ ಇಂಡಿಯನ್ಸ್ ವಿರುದ್ಧ 1000 ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಮಹತ್ವದ ಮೈಲುಗಲ್ಲನ್ನು ತಲುಪಿದ್ದಾರೆ.
ರಾಹುಲ್ ದಾಖಲೆ ಮುರಿದ ‘ಕಿಂಗ್’
ತಮ್ಮ 36ನೇ ಇನಿಂಗ್ಸ್‌ನಲ್ಲಿ ಕೊಹ್ಲಿ ಈ ಐತಿಹಾಸಿಕ ಮೈಲುಗಲ್ಲು ತಲುಪಿದ್ದು, ಈ ಮೂಲಕ ಕನ್ನಡಿಗ ಕೆ.ಎಲ್. ರಾಹುಲ್ ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಈ ಹಿಂದೆ ಕೆ.ಎಲ್. ರಾಹುಲ್ ಅವರು ಮುಂಬೈ ಇಂಡಿಯನ್ಸ್ ಎದುರು 21 ಇನಿಂಗ್ಸ್‌ಗಳಿಂದ 977 ರನ್‌ಗಳನ್ನು ಗಳಿಸಿ ಅಗ್ರಸ್ಥಾನದಲ್ಲಿದ್ದರು. ಇದೀಗ ಕೊಹ್ಲಿ ಆ ಸ್ಥಾನವನ್ನು ಅಲಂಕರಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಎದುರು ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳು:
- ವಿರಾಟ್ ಕೊಹ್ಲಿ: 1003* ರನ್ (36 ಇನಿಂಗ್ಸ್)
- ಕೆ.ಎಲ್. ರಾಹುಲ್: 977 ರನ್ (21 ಇನಿಂಗ್ಸ್)
- ಶಿಖರ್ ಧವನ್: 901 ರನ್ (28 ಇನಿಂಗ್ಸ್)
- ಅಜಿಂಕ್ಯ ರಹಾನೆ: 888 ರನ್ (29 ಇನಿಂಗ್ಸ್)
- ಸುರೇಶ್ ರೈನಾ: 850 ರನ್ (36 ಇನಿಂಗ್ಸ್)
ಅಗ್ರಸ್ಥಾನದಲ್ಲಿ ಕೊಹ್ಲಿ ದರ್ಬಾರ್
ಮುಂಬೈ ವಿರುದ್ಧದ ಈ ಪಂದ್ಯದ ರನ್‌ಗಳೊಂದಿಗೆ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಒಟ್ಟಾರೆ 8814* ರನ್‌ಗಳನ್ನು ಕಲೆಹಾಕಿದ್ದು, ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅವರು ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧವೂ 1,188 ರನ್‌ಗಳನ್ನು ಬಾರಿಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ನಿರ್ಮಿಸಿದ್ದರು. ಆ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ಎದುರು 1,161 ರನ್ ಸಿಡಿಸಿದ್ದ ರೋಹಿತ್ ಶರ್ಮಾ ಅವರ ದಾಖಲೆಯನ್ನು ಅವರು ಮುರಿದಿದ್ದರು.
9000 ರನ್ ಮೈಲುಗಲ್ಲಿನ ಸನಿಹ
ವಿರಾಟ್ ಕೊಹ್ಲಿ ಇದೀಗ ಐಪಿಎಲ್ ಇತಿಹಾಸದಲ್ಲಿ ಮತ್ತೊಂದು ಬೃಹತ್ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಈಗಾಗಲೇ 8800ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿರುವ ಅವರು, ಐಪಿಎಲ್‌ನಲ್ಲಿ 9000 ರನ್‌ಗಳನ್ನು ಪೂರೈಸಿದ ವಿಶ್ವದ ಮೊದಲ ಹಾಗೂ ಏಕೈಕ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಲು ಕೇವಲ 200 ರನ್‌ಗಳ ಅಂತರದಲ್ಲಿದ್ದಾರೆ. ಅವರು ಪ್ರಸ್ತುತ ಹೊಂದಿರುವ ಅದ್ಭುತ ಫಾರ್ಮ್ ಅನ್ನು ಗಮನಿಸಿದರೆ, ನಡೆಯುತ್ತಿರುವ 2026ರ ಐಪಿಎಲ್ ಟೂರ್ನಿಯಲ್ಲೇ ಈ ಮೈಲುಗಲ್ಲು ತಲುಪುವುದು ಬಹುತೇಕ ಖಚಿತ.
ಗೇಲ್ ದಾಖಲೆಗೂ ಕುತ್ತು?
ಟಿ20 ಮಾದರಿಯ ಕ್ರಿಕೆಟ್‌ನಲ್ಲಿ ಈಗಾಗಲೇ 13,500ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿರುವ ಕೊಹ್ಲಿ, ಟಿ20 ಇತಿಹಾಸದಲ್ಲೇ ಅತಿ ಹೆಚ್ಚು ರನ್ ಸಿಡಿಸಿರುವ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರ ದಾಖಲೆಯನ್ನೂ ಮುರಿಯುವತ್ತ ಹೆಜ್ಜೆ ಹಾಕಿದ್ದಾರೆ. ಗೇಲ್ ದಾಖಲೆಯನ್ನು ಸರಿಗಟ್ಟಲು ಅವರಿಗೆ ಇನ್ನೂ ಸುಮಾರು 1000 ರನ್‌ಗಳ ಅಗತ್ಯವಿದೆ. ಇದೇ ಲಯವನ್ನು ಅವರು ಮುಂದುವರಿಸಿದರೆ, ಮುಂದಿನ 2027ರ ಐಪಿಎಲ್ ಟೂರ್ನಿಯ ವೇಳೆಗೆ ಆ ದಾಖಲೆಯನ್ನೂ ತಮ್ಮ ಮುಡಿಗೇರಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಐಪಿಎಲ್ 2026 : ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಬೀಗಿದ ಆರ್‌ಸಿಬಿ



















