ಕಿಂಗ್ ಹಾಗೂ ಸಾಲ್ಟ್ ಆರ್ಭಟದಿಂದಾಗಿ, ಕೃಣಾಲ್ ಪಾಂಡ್ಯ ಅವರ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಮಿಂಚಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಗೆಲುವಿನ ಅಭಿಯಾನ ಆರಂಭಿಸಿದೆ.
ಮೊದಲ ಪಂದ್ಯದಲ್ಲಿ ಆರ್‌ಸಿಬಿ 7 ವಿಕೆಟ್‌ಗಳ ಸ್ಪಷ್ಟ ಗೆಲುವು ದಾಖಲಿಸಿತು. ಈ ಸೋಲಿನಿಂದ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಮ್ಮ ತವರಿನ ಅಭಿಮಾನಿಗಳ ಎದುರೇ ಮುಖಭಂಗಕ್ಕೊಳಗಾಯಿತು. ವಿಶೇಷವೆಂದರೆ 2008ರ ಮೊದಲ ಉದ್ಘಾಟನಾ ಆವೃತ್ತಿಯ ಐಪಿಎಲ್ನ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ತಂಡ ಆರ್ಸಿಬಿಯನ್ನು ಬೆಂಗಳೂರಿನ ಸ್ಟೇಡಿಯಮ್ನಲ್ಲಿ ಸೋಲಿಸಿತ್ತು. ಇದೀಗ 18 ವರ್ಷದ ಬಳಿಕ ಅವರ ಸ್ಟೇಡಿಯಮ್ನಲ್ಲಿ ಆ ತಂಡವನ್ನು ಸೋಲಿಸಿ ಸೇಡು ತೀರಿಸಿಕೊಂಡಿತು.
ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಬೌಲಿಂಗ್ ಆಯ್ಕೆ ಮಾಡಿದರು. ಕೆಕೆಆರ್ ಮೊದಲಿಗೆ ಬ್ಯಾಟಿಂಗ್ ನಡೆಸಿ 8 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಪ್ರತಿಯಾಗಿ ಆಡಿದ ಆರ್ಸಿಬಿ 22 ಎಸೆತಗಳನ್ನು ಬಾಕಿ ಇರುವಾಗಲೇ ಸುಲಭವಾಗಿ ಹಿಂಬಾಲಿಸಿ, ಜಯಭೇರಿ ಬಾರಿಸಿತು.
175 ರನ್ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ನಿಖರ ಬ್ಯಾಟಿಂಗ್ ಪ್ರದರ್ಶನ ನೀಡಿತು. ಪವರ್‌ಪ್ಲೇಯಲ್ಲಿ ಸುಲಭವಾಗಿ ರನ್ ಗಳಿಸಿದರು. ಫಿಲ್ ಸಾಲ್ಟ್ 55 ರನ್ ಮತ್ತು ವಿರಾಟ್ ಕೊಹ್ಲಿ 59 ರನ್ ಗಳಿಸಿ ಇಬ್ಬರೂ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು. ದೇವದತ್ ಪಡಿಕ್ಕಲ್ 10 ರನ್ ಬಾರಿಸಿ ಔಟಾದರು. ಆದರೆ, ನಾಯಕ ರಜತ್ ಪಾಟೀದಾರ್ ಸಹ 35 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು. ಕೊನೆಯಲ್ಲಿ ಲಿವಿಂಗ್ಸ್ಟನ್ ಅಬ್ಬರ ಬ್ಯಾಟಿಂಗ್ ಮಾಡಿ 15 ರನ್ ಬಾರಿಸಿ ಗೆಲುವು ತಂದುಕೊಟ್ಟರು. ಕೊಹ್ಲಿ ತಂಡವನ್ನು ಗೆಲ್ಲಿಸಿಯೇ ಪೆವಿಲಿಯನ್ ಕಡೆಗೆ ಮುಖ ಮಾಡಿದರು.
ಆರ್ಸಿಬಿ ಬೌಲಿಂಗ್ ಹಿಡಿತ
ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಪರ ಆರಂಭಿಕ ಓವರ್‌ನಲ್ಲಿ ಜೀವದಾನ ಪಡೆದಿದ್ದರೂ ಕ್ವಿಂಟನ್ ಡಿ ಕಾಕ್ ಕೇವಲ 4 ರನ್‌ಗಳಿಗೆ ಜೋಶ್ ಹೇಜಲ್‌ವುಡ್ ಅವರಿಂದ ಬೌಲ್ಡ್ ಆದರು. ನಂತರ ನಾಯಕ ರಹಾನೆ ಮತ್ತು ಸುನಿಲ್ ನರೈನ್ ಜೊತೆಯಾಗಿ ಆರ್‌ಸಿಬಿ ಬೌಲಿಂಗ್ ದಾಳಿಯನ್ನು ಹಿಮ್ಮೆಟ್ಟಿಸಿದರು. ಇವರಿಬ್ಬರು ಎರಡನೇ ವಿಕೆಟ್‌ಗೆ 55 ಎಸೆತಗಳಲ್ಲಿ 103 ರನ್‌ಗಳ ಉತ್ತಮ ಜತೆಯಾಟವಾಡಿದರು.
ಅಜಿಂಕ್ಯ ರಹಾನೆ ಕೇವಲ 31 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಗಳಿಸಿ 56 ರನ್ ಗಳಿಸಿದರು. ಅವರ ಆಟ ಅಭಿಮಾನಿಗಳಿಗೆ ತೀವ್ರ ಮನರಂಜನೆ ನೀಡಿತು. ನರೈನ್ ಕೂಡ 26 ಎಸೆತಗಳಲ್ಲಿ 44 ರನ್ ಸಿಡಿಸಿದರು. ಅವರು 5 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದರು. ಈ ಜೋಡಿ ಇನ್ನಷ್ಟು ಸಮಯ ಕ್ರೀಸಿನಲ್ಲಿ ಉಳಿದಿದ್ದರೆ ಮೊತ್ತ 230ರ ಗಡಿ ದಾಟುತ್ತದೆ ಎನ್ನುವ ನಿರೀಕ್ಷೆ ಇದ್ದರೂ, ಆರ್‌ಸಿಬಿ ಬೌಲರ್‌ಗಳು ತಿರುಗೇಟು ಕೊಟ್ಟರು.
ಕೃನಾಲ್ ಪಾಂಡ್ಯ ಮೂರು ಪ್ರಮುಖ ವಿಕೆಟ್ ಕಿತ್ತು ಕೆಕೆಆರ್ ಹಿನ್ನಡೆಗೆ ಕಾರಣರಾದರು. ರಹಾನೆ, ವೆಂಕಟೇಶ್ ಅಯ್ಯರ್ ಹಾಗೂ ರಿಂಕು ಸಿಂಗ್ ಅವರನ್ನು ಕಡಿಮೆ ಮೊತ್ತಕ್ಕೆ ಔಟ್ ಮಾಡಿದರು. ಈ ನಡುವೆ ರಸಿಕ್ ಸಲಾಮ್ ಅವರು ಒಂದು ವಿಕೆಟ್ ಪಡೆದು ನೆರವಾದರು.
ಆರ್‌ಸಿಬಿ 17.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿ 22 ಎಸೆತಗಳನ್ನು ಉಳಿಸಿಕೊಂಡು ಗೆಲುವಿನ ದಡ ತಲುಪಿತು. ಈ ಜಯದೊಂದಿಗೆ ಆರ್‌ಸಿಬಿ ಉತ್ತಮ ಟೂರ್ನಿಯ ಆರಂಭಕ್ಕೆ ಕಾರಣವಾಗಿದ್ದು, ಕೆಕೆಆರ್ ಹಿನ್ನಡೆಯೊಂದಿಗೆ ಮುಂದಿನ ಪಂದ್ಯಗಳಿಗೆ ಪಾಠ ಕಲಿಯಬೇಕಾದ ಸ್ಥಿತಿಯಲ್ಲಿದೆ.