ಬೆಂಗಳೂರು: ಆರ್ ಸಿಬಿ ಅಭಿಮಾನಿಯೊಬ್ಬರಿಗೆ ದುಷ್ಕರ್ಮಿಗಳು ಸಂಭ್ರಮಾಚರಣೆ ವೇಳೆ ಚಾಕು ಇರಿದು ಕ್ರೌರ್ಯ ಮೆರೆದಿರುವ ಆರೋಪವೊಂದು ಕೇಳಿ ಬಂದಿದೆ.
ಪೀಣ್ಯದ ಜಾಲಹಳ್ಳಿ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಐಪಿಎಲ್ ಫೈನಲ್ ಕದನಲ್ಲಿ ಪಂಜಾಬ್ ವಿರುದ್ಧ ಆರ್ ಸಿಬಿ ಭರ್ಜರಿ ಜಯ ಸಾಧಿಸಿ ಟ್ರೋಫಿಗೆ ಮುತ್ತಿಕ್ಕಿತ್ತು. ಈ ವೇಳೆ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದರು. ಸಂಭ್ರಮಾಚರಣೆ ವೇಳೆಯೇ ದುಷ್ಕರ್ಮಿಗಳು ಚಾಕು ಇರಿದಿರುವ ಆರೋಪ ಕೇಳಿ ಬಂದಿದೆ.
ಸಂಭ್ರಮಾಚರಣೆ ಮಾಡುತ್ತ ಬಾರ್ ಗೆ ತೆರಳುತ್ತಿದ್ದ ವೇಳೆ ಯುವಕನ ಕುತ್ತಿಗೆಗೆ ಚಾಕು ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ತಡರಾತ್ರಿ 12 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಯುವಕ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಯುವಕ ಹಾಗೂ ಅಲ್ಲಿದ್ದವರು ಪ್ರತಿರೋಧಿಸುತ್ತಿದ್ದಂತೆ ಗ್ಯಾಂಗ್ ಕಾಲ್ಕಿತ್ತಿದೆ. ಯುವಕ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾನೆ. ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.