ಬೆಂಗಳೂರು : ಖಾಸಗಿ ಹಣಕಾಸು ಸಂಸ್ಥೆಗಳು ಹೆಚ್ಚಿನ ಬಡ್ಡಿಗೆ ಸಾಲ ನೀಡಿ, ಬಳಿಕ ಸಾಲಗಾರರಿಗೆ ಕಿರುಕುಳ ನೀಡುವ ಪ್ರಕರಣಗಳು ಇತ್ತೀಚೆಗೆ ಸುದ್ದಿಯಾಗಿದ್ದವು. ಅದರಲ್ಲೂ, ಗ್ರಾಮೀಣ ಭಾಗದ ರೈತರು ಸಾಲ ಮರುಪಾವತಿ ಮಾಡಲು ಆಗದೆ, ಹಣಕಾಸು ಸಂಸ್ಥೆಗಳ ಕಿರುಕುಳಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ, ಊರೇ ಬಿಟ್ಟು ಹೋದ ಪ್ರಕರಣಗಳು ಸುದ್ದಿಯಾಗಿವೆ. ಇದರ ಬೆನ್ನಲ್ಲೇ, ಸಾಲ ವಸೂಲಾತಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಈಗ ಕಠಿಣ ನಿಯಮಗಳನ್ನು ರೂಪಿಸಿದೆ. ಇದರಿಂದಾಗಿ ಸಾಲಗಾರರಿಗೆ ಕೆಲ ಸುರಕ್ಷತೆಗಳು ಸಿಗಲಿವೆ.
ಸಾಲ ವಸೂಲಾತಿಗೆ ಸಂಬಂಧಿಸಿದ ನಿಯಮಗಳಿಗೆ ತಿದ್ದುಪಡಿ ಮಾಡಲು ಆರ್ ಬಿಐ ಮುಂದಾಗಿದೆ. ಇದಕ್ಕಾಗಿ ಕರಡು ನಿಯಮಗಳನ್ನೂ ರೂಪಿಸಿದೆ. ಸಣ್ಣ ಹಣಕಾಸು ಬ್ಯಾಂಕ್ ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್ ಬಿ ಎಫ್ ಸಿ), ಸ್ಥಳೀಯ ಬ್ಯಾಂಕ್ ಗಳು, ನಗರ ಸಹಕಾರಿ ಬ್ಯಾಂಕ್ ಗಳಿಗೆ ಹೊಸ ನಿಯಮಗಳು ಅನ್ವಯವಾಗುತ್ತವೆ. ಹೊಸ ನಿಯಮಗಳು 2026ರ ಜುಲೈ 1ರಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಹಾಗಾದರೆ, ನಿಯಮಗಳು ಏನೇನು? ತಿಳಿಯೋಣ ಬನ್ನಿ.
ಆರ್‌ಬಿಐ ಪ್ರಸ್ತಾಪಿತ ನಿಯಮಗಳು
• ಸಾಲಗಾರರಿಗೆ ಬೆಳಗ್ಗೆ 8ರಿಂದ ಸಂಜೆ 7ಗಂಟೆಯೊಳಗೆ ಮಾತ್ರ ಸಾಲ ವಸೂಲಿಗಾಗಿ ಕರೆ ಮಾಡಬೇಕು. ಸಂಜೆ 7 ಗಂಟೆ ನಂತರ ಕರೆ ಮಾಡುವ ಹಾಗಿಲ್ಲ.
• ಸಾಲ ವಸೂಲಿ ಮಾಡುವವರು ಯಾರು ಎಂಬುದನ್ನು ಹಣಕಾಸು ಸಂಸ್ಥೆಗಳು ನೋಟಿಸ್ ಬೋರ್ಡ್, ಆ್ಯಪ್ ಹಾಗೂ ವೆಬ್ ಸೈಟ್ ನಲ್ಲಿ ನಮೂದಿಸಿರಬೇಕು.
• ಸಾಲ ಪಡೆದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಹಾಗಿಲ್ಲ. ಮನಸ್ಸಿಗೆ ಬಂದ ಹಾಗೆ, ಕೆಟ್ಟ ಪದಗಳಿರುವ ಸಂದೇಶಗಳನ್ನು ಕಳುಹಿಸುವಂತಿಲ್ಲ. ಬೆದರಿಕೆ ಹಾಕುವಂತಿಲ್ಲ.
• ಸಾಲಗಾರರ ಮನೆಗೆ ವಸೂಲಿ ಸಿಬ್ಬಂದಿಯು ತೆರಳಿ ಸಾಲ ಕೇಳಬಹುದು. ಆದರೆ, ಸಾಲಗಾರನ ಸಂಬಂಧಿಕರ ಮನೆಗೆ ತೆರಳುವುದು, ಅವರಿಗೆ ಸಾಲದ ವಿಷಯ ತಿಳಿಸುವಂತಿಲ್ಲ.
• ಸಾಲಗಾರ ಮನೆಯಲ್ಲಿ ಮದುವೆಯಂತಹ ಸಮಾರಂಭಗಳು ನಡೆಯುತ್ತಿದ್ದರೆ, ಅವರ ಮನೆಯಲ್ಲಿ ಯಾರಾದರೂ ಮೃತಪಟ್ಟಿದ್ದಾಗ ಸೇರಿ ವಿವಿಧ ಸಂದರ್ಭಗಳಲ್ಲಿ ತೆರಳಿ ಸಾಲ ಮರುಪಾವತಿಗೆ ಆಗ್ರಹಿಸುವಂತಿಲ್ಲ.
ಇದನ್ನೂ ಓದಿ : ‘ಇತಿಹಾಸ ಬದಲಿಸಲು ಸಾಧ್ಯವಿಲ್ಲ’ | ಭಾರತದ ವಿರುದ್ಧ ಸೋಲು ಒಪ್ಪಿಕೊಂಡ್ರಾ ಪಾಕ್ ನಾಯಕ ಸಲ್ಮಾನ್ ಆಘಾ?



















