ಬೆಂಗಳೂರು: ಮಕ್ಕಳ ಶಿಕ್ಷಣ, ಮನೆ, ನಿವೇಶನ ಖರೀದಿ, ಮನೆಯಲ್ಲಿ ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ, ಹೆಚ್ಚಿನ ಜನ ಚಿನ್ನವನ್ನು ಅಡಮಾನ ಇರಿಸಿ ಸಾಲ ಪಡೆಯುತ್ತಾರೆ. ದೇಶದಲ್ಲಿ ಹೀಗೆ ಚಿನ್ನದ ಮೇಲೆ ಸಾಲ ಪಡೆಯುವವರ ಸಂಖ್ಯೆ ಕೋಟಿಗಟ್ಟಲೆ ಇದೆ. ಇದನ್ನು ಮನಗಂಡ ಭಾರತೀಯರ ರಿಸರ್ವ್ ಬ್ಯಾಂಕ್ (RBI New Gold Loan Rules) ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅದರಲ್ಲೂ, ಹೊಸ ನಿಯಮಗಳು ಚಿನ್ನದ ಮೇಲೆ ಸಾಲ ಪಡೆಯುವವರ ಅನುಕೂಲಕರವಾಗಿವೆ.
ಚಿನ್ನದ ಮೌಲ್ಯದ ಮೇಲೆ ಸಾರ್ವಜನಿಕರಿಗೆ ನೀಡುವ ಸಾಲದ ಪ್ರಮಾಣವನ್ನು ಏರಿಕೆ ಮಾಡಲಾಗಿದೆ. ಅಂದರೆ, ನೀವು 2.5 ಲಕ್ಷ ರೂಪಾಯಿ ಅಥವಾ ಕಡಿಮೆ ಮೊತ್ತವನ್ನು ಸಾಲ ಪಡೆಯಲು ಚಿನ್ನ ಅಡಮಾನ ಇಟ್ಟರೆ, ನಿಮ್ಮ ಚಿನ್ನದ ಮೌಲ್ಯದ ಶೇ.85ರಷ್ಟು ಮೊತ್ತವನ್ನು ಸಾಲವನ್ನಾಗಿ ನೀಡಲಾಗುತ್ತದೆ. ಆಗ ನೀವು ಹೆಚ್ಚಿನ ಚಿನ್ನವನ್ನು ಅಡಮಾನ ಇಡುವುದು ತಪ್ಪುತ್ತದೆ.
ಅದೇ ರೀತಿ, ನಿಮಗೆ 2.5 ರೂ.ನಿಂದ 5 ಲಕ್ಷ ರೂಪಾಯಿವರೆಗೆ ಸಾಲ ಬೇಕಿದ್ದರೆ, ಚಿನ್ನದ ಮೌಲ್ಯದ ಶೇ.80ರಷ್ಟು ಮೊತ್ತವನ್ನು ಸಾಲವನ್ನಾಗಿ ನೀಡಲಾಗುತ್ತದೆ. ಹಾಗೆಯೇ, 5 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತವು ಸಾಲವಾಗಿ ಬೇಕಿದ್ದರೆ ನಿಮ್ಮ ಚಿನ್ನದ ಮೌಲ್ಯದ ಶೇ.75ರಷ್ಟು ಮೊತ್ತವನ್ನು ಸಾಲವನ್ನಾಗಿ ನೀಡಲಾಗುತ್ತದೆ. ಆಗ ಗ್ರಾಹಕರು ಹೆಚ್ಚಿನ ಚಿನ್ನವನ್ನು ಅಡಮಾನ ಇರಿಸಬೇಕಾಗುತ್ತದೆ. ಈ ಪ್ರಮಾಣವನ್ನು ಏರಿಸಿರುವುದು ಗ್ರಾಹಕರಿಗೆ ರಿಲೀಫ್ ನೀಡಿದೆ.
ಸಾಲಗಾರರ ಸುರಕ್ಷತೆಗೆ ಜಾರಿಗೊಳಿಸಿದ ಕ್ರಮಗಳು
ಸಣ್ಣ ಸಾಲಗಾರರಿಗೆ ವಿನಾಯಿತಿ ನೀಡಲಾಗಿದೆ. 2.5 ಲಕ್ಷ ರೂಪಾಯಿಗಿಂತ ಕಡಿಮೆ ಮೊತ್ತದ ಸಾಲಗಳಿಗೆ ಯಾವುದೇ ಕಟ್ಟುನಿಟ್ಟಾದ ಆದಾಯದ ಪುರಾವೆ ಅಥವಾ ಕ್ರೆಡಿಟ್ ಹಿಸ್ಟರಿ ಅಗತ್ಯವಿಲ್ಲ ಎಂಬ ನಿಯಮವನ್ನೂ ಆರ್ ಬಿಐ ಜಾರಿಗೆ ತಂದಿದೆ. ಹಾಗೆಯೇ, ಸಾಲವನ್ನು ಪೂರ್ತಿಯಾಗಿ ಪಾವತಿಸಿದ ದಿನವೇ ಅಥವಾ ಗರಿಷ್ಠ 7 ಕೆಲಸದ ದಿನಗಳೊಳಗೆ ಅಡಮಾನ ಇರಿಸಿದ ಚಿನ್ನವನ್ನು ಸಾಲಗಾರರಿಗೆ ಮರಳಿಸುವುದು ಕಡ್ಡಾಯ ಎಂದು ಕೂಡ ಸೂಚಿಸಿದೆ. ಒಂದು ವೇಳೆ ಬ್ಯಾಂಕ್ ವಿಳಂಬ ಮಾಡಿದರೆ, ದಿನಕ್ಕೆ 5 ಸಾವಿರ ರೂಪಾಯಿ ದಂಡವನ್ನು ಸಾಲಗಾರನಿಗೆ ಪಾವತಿಸಬೇಕಾಗುತ್ತದೆ ಎಂದೂ ತಿಳಿಸಲಾಗಿದೆ.
ಇದನ್ನೂ ಓದಿ: ಕಾಸ್ಮೋಸ್ ಬ್ಯಾಂಕಿನಲ್ಲಿ ಮ್ಯಾನೇಜರ್ ಹುದ್ದೆಗಳ ನೇಮಕಾತಿ – ಕೂಡಲೇ ಅರ್ಜಿ ಸಲ್ಲಿಸಿ



















