ಬೆಂಗಳೂರು: ಗೃಹ ಸಾಲ, ವಾಹನ ಸಾಲ, ಶೈಕ್ಷಣಿಕ ಸಾಲ ಸೇರಿ ಯಾವುದೇ ರೀತಿಯ ಸಾಲ ಮಾಡಿದವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಈಗ ಸಿಹಿ ಸುದ್ದಿ ನೀಡಿದೆ. ಸಾಲ ಮಾಡಿದವರು ಫ್ಲೋಟಿಂಗ್ ಇಂಟರೆಸ್ಟ್ ರೇಟ್ ಅನ್ವಯಿಸಿಕೊಂಡಿದ್ದರೂ ಇರುತ್ತಿದ್ದ 3 ವರ್ಷಗಳ ಲಾಕ್-ಇನ್ ಪೀರಿಯಡ್ ನಿಯಮಗಳನ್ನು ಆರ್ ಬಿ ಐ ಸಡಿಲಗೊಳಿಸಿದೆ. ಇದರಿಂದಾಗಿ, ಸಾಲ ನೀಡಿದ ಬ್ಯಾಂಕ್ ಗಳು ಬಡ್ಡಿದರವನ್ನು ಇಳಿಸಿದ ಕೂಡಲೇ ಸಾಲಗಾರರ ಇಎಂಐ ಹೊರೆ ಕಡಿಮೆಯಾಗುತ್ತದೆ.
ಅಕ್ಟೋಬರ್ ನಿಂದಲೇ ಹೊಸ ನಿಯಮ ಜಾರಿಗೆ ಬಂದಿದೆ. ಇದುವರೆಗೆ ಯಾವುದೇ ವ್ಯಕ್ತಿ ಸಾಲ ಪಡೆಯುವಾಗ ನಿಗದಿಪಡಿಸಿದ ಬಡ್ಡಿಯ ದರವನ್ನೇ ಪಾವತಿಸಬೇಕಿತ್ತು. ಅಂದರೆ, ಮೂರು ವರ್ಷಗಳವರೆಗೆ ಅದೇ ಬಡ್ಡಿಯನ್ನು ಪಾವತಿಸಬೇಕು. ಆರ್ ಬಿ ಐ ರೆಪೋ ರೇಟ್ ಇಳಿಸಿದರೂ, ಬ್ಯಾಂಕುಗಳು ಬಡ್ಡಿದರವನ್ನು ಕಡಿತಗೊಳಿಸಿದರೂ ಅದೇ ಬಡ್ಡಿಯನ್ನು ಪಾವತಿಸಬೇಕಿತ್ತು. ಈಗ ಈ ನಿಯಮವನ್ನು ಆರ್ ಬಿ ಐ ಸಡಿಲಗೊಳಿಸಿದೆ.
ಹೊಸ ನಿಯಮಗಳ ಪ್ರಕಾರ, ಮೂರು ವರ್ಷಗಳಿಗೂ ಮೊದಲೇ ಸಾಲಗಾರರಿಗೆ ಹೊಸ ಬಡ್ಡಿದರವನ್ನೇ ಅನ್ವಯಿಸಬೇಕು. ಉದಾಹರಣೆಗೆ, ಸಾಲಗಾರನು ಶೇ.8.5ರ ಬಡ್ಡಿದರಲ್ಲಿ ಸಾಲ ಪಡೆದಿದ್ದಾನೆ ಎಂದಿಟ್ಟುಕೊಳ್ಳಿ. ಸಾಲ ಪಡೆದ ಆರು ತಿಂಗಳಲ್ಲಿಯೇ ಆರ್ ಬಿ ಐ ರೆಪೋದರ ಇಳಿಕೆ ಮಾಡಿದರೆ, ಸಾಲಗಾರನ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಬಡ್ಡಿದರ ಕಡಿಮೆ ಮಾಡಿದರೆ, ಅದರ ಲಾಭವನ್ನು ಕೂಡಲೇ ಸಾಲಗಾರರಿಗೆ ವರ್ಗಾಯಿಸಬೇಕಾಗುತ್ತದೆ.
ಆರ್ ಬಿ ಐ ರೆಪೋದರಲ್ಲಿ 50 ಬೇಸಿಸ್ ಪಾಯಿಂಟ್ ಗಳನ್ನು ಇಳಿಕೆ ಮಾಡಿತು ಎಂದಿಟ್ಟುಕೊಳ್ಳಿ. ಆಗ ಮುಂದಿನ ತಿಂಗಳಿಂದ ಸಾಲ ನೀಡಿದ ಬ್ಯಾಂಕ್ ಕೂಡ ಸಾಲಗಾರರಿಗೆ ಶೇ.8ರಷ್ಟು ಬಡ್ಡಿಯನ್ನೇ ವಿಧಿಸಬೇಕಾಗುತ್ತದೆ. ಪ್ರಸಕ್ತ ವರ್ಷದಲ್ಲಿ ಆರ್ ಬಿಐ ಎರಡು ಬಾರಿ ರೆಪೋ ದರವನ್ನು ಇಳಿಕೆ ಮಾಡಿದೆ. ಇದಾದ ಬಳಿಕ ಬ್ಯಾಂಕ್ ಗಳು ಕೂಡ ಬಡ್ಡಿದರವನ್ನು ಇಳಿಕೆ ಮಾಡಿವೆ.
ಇದನ್ನೂ ಓದಿ: ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ನೀವೆಷ್ಟು ದುಡ್ಡು ಪಾವತಿಸಬೇಕು? ಇಲ್ಲಿದೆ ಮಾಹಿತಿ



















