ಮುಂಬೈ: ಖ್ಯಾತ ಉದ್ಯಮಿ ರತನ್ ಟಾಟಾ ಅವರು ಇಹಲೋಕ ತ್ಯಜಿಸಿದ್ದಾರೆ. ಈ ಮಧ್ಯೆ ಮಹಾರಾಷ್ಟ್ರ ಸರ್ಕಾರವು ಭಾರತ ರತ್ನ ಪ್ರಶಸ್ತಿಗೆ ಪ್ರಸ್ತಾಪಿಸಲು ಶಿಫಾರಸು ಮಾಡಲು ನಿರ್ಧರಿಸಿದೆ. ರಾಜ್ಯ ಸಚಿವ ಸಂಪುಟದಲ್ಲಿ ಟಾಟಾ ಅವರಿಗೆ ಸಂತಾಪ ಸೂಚಿಸುವ ಪ್ರಸ್ತಾವನೆ ಅಂಗೀಕರಿಸಲಾಗಿದೆ.
ಸಂಪುಟ ಸಭೆಯಲ್ಲಿ ಸಂತಾಪ ಸೂಚಕ ನಿರ್ಣಯ ಅಂಗೀಕರಿಸಲಾಯಿತು ಎಂದು ಮುಖ್ಯಮಂತ್ರಿಗಳ ಕಚೇರಿಯ ಪ್ರಕಟಣೆ ಹೇಳಿದೆ. ಕೈಗಾರಿಕೋದ್ಯಮಿ ದಿವಂಗತ ರತನ್ ಟಾಟಾಗೆ ಭಾರತ ರತ್ನ ನೀಡಬೇಕೆಂದು ಕೇಂದ್ರವನ್ನು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು.
ಉದ್ಯಮಗಳನ್ನು ಸ್ಥಾಪಿಸುವ ಮೂಲಕ ದೇಶವನ್ನು ಪ್ರಗತಿ ಮತ್ತು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಬಹುದು. ಇದಕ್ಕೆ ದೇಶ ಪ್ರೇಮ ಮತ್ತು ಸಮಾಜದ ಉನ್ನತಿಗಾಗಿ ಪ್ರಾಮಾಣಿಕ ಭಾವನೆಗಳೂ ಬೇಕು. ದೇಶ, ಸಮಾಜಕ್ಕಾಗಿ ಬದ್ಧತೆ ಹೊಂದಿದ್ದ ದೂರದೃಷ್ಟಿಯ ನಾಯಕನನ್ನು ಕಳೆದುಕೊಂಡಿದ್ದೇವೆ. ಕೈಗಾರಿಕಾ ವಲಯ ಮತ್ತು ಸಮಾಜದ ಉನ್ನತಿಯಲ್ಲಿ ಟಾಟಾ ಅವರ ಪಾತ್ರ ಅಪ್ರತಿಮವಾಗಿತ್ತು. ಅವರು ಶಿಸ್ತಿನಿಂದ ಅನುಸರಿಸುವ ಮೂಲಕ ಎಲ್ಲಾ ಸವಾಲುಗಳನ್ನು ನಿಭಾಯಿಸಿದರು ಎಂದು ಸರ್ಕಾರದ ಪ್ರಕಟಣೆ ಹೇಳಿದೆ.