ಉಡುಪಿ: ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿಯನ್ನು ದೋಷಿ ಎಂದು ಪೋಕ್ಸೊ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಶ್ರೀನಿವಾಸ್ ಸುವರ್ಣ ಆದೇಶಿಸಿದ್ದಾರೆ.

ಬಾಗಲಕೋಟೆ ಮೂಲದ ಮಂಜುನಾಥ್ ಎನ್. ಅಪರಾಧಿಯಾಗಿದ್ದು, ಆತನಿಗೆ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿದೆ. ಸಂತ್ರಸ್ತೆಗೆ ಸರ್ಕಾರದಿಂದ 1.50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.
ಸಂತ್ರಸ್ತೆಯ ಅಣ್ಣನ ಸ್ನೇಹಿತನಾದ ಆರೋಪಿ, ಬಾಲಕಿಯನ್ನು ಫೋನ್‌ನಲ್ಲಿ ಸಂಪರ್ಕ ಮಾಡಿ, ಪ್ರೀತಿಸುತ್ತೇನೆ ಎಂದು ನಂಬಿಸಿದ್ದ. ಬಳಿಕ ಪ್ರೀತಿಯ ಬಗ್ಗೆ ಅಣ್ಣನಿಗೆ ತಿಳಿಸುವುದಾಗಿ ಬೆದರಿಸುತ್ತಿದ್ದ. ಸಂತ್ರಸ್ತೆ ತನ್ನ ಅಜ್ಜಿ ಮನೆಯಾದ ಗದಗ ಜಿಲ್ಲೆಗೆ ತೆರಳಿದ್ದಾಗ, ಆರೋಪಿ ಆಕೆಯನ್ನು ಬಲವಂತದಿಂದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ದೈಹಿಕ ಸಂಪರ್ಕ ಬೆಳೆಸಿದ್ದ. ಈ ವಿಚಾರ ಯಾರಿಗಾದರೂ ಹೇಳಿದರೆ, ವಿಡಿಯೊವನ್ನು ಅಣ್ಣ ಹಾಗೂ ಮನೆಯವರಿಗೆ ಕಳುಹಿಸುವುದಾಗಿ ಬೆದರಿಸಿದ್ದಾನೆ.
ವಿಷಯ ತಿಳಿದ ಬಾಲಕಿಯ ತಾಯಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಅಂದಿನ ಕಾರ್ಕಳ ಡಿವೈಎಸ್‌ಪಿ ಅರವಿಂದ್ ಕಲ್ಲಗುಜ್ಜಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.