ಅಮೃತಸರ: “ಮೇರಾ ಯೇಶು, ಯೇಶು”( Yeshu Yeshu Prophet) ಎಂಬ ವೈರಲ್ ಮೀಮ್‌ಗೆ ಕಾರಣವಾಗಿದ್ದ ವಿವಾದಿತ ಪಾದ್ರಿ ಬಜೀಂದರ್ ಸಿಂಗ್‍ಗೆ, 2018 ರ ಅತ್ಯಾಚಾರ ಪ್ರಕರಣದಲ್ಲಿ ಮೊಹಾಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಕಳೆದ ವಾರವಷ್ಟೇ ಪಾದ್ರಿಯನ್ನು ತಪ್ಪಿತಸ್ಥ ಎಂದು ಘೋಷಿಸಿತ್ತು. ಮಂಗಳವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗಿದೆ.
ಮೊಹಾಲಿ ಕೋರ್ಟ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ (ಎಡಿಎಸ್‌ಜೆ) ವಿಕ್ರಾಂತ್ ಕುಮಾರ್ ಅವರೇ ಈ ತೀರ್ಪು ಘೋಷಿಸಿದ್ದಾರೆ.
ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಕರಣದ ಸಂತ್ರಸ್ತೆ, “ಅವನೊಬ್ಬ (ಬಜಿಂದರ್ ಸಿಂಗ್) ಸೈಕೋ. ಜೈಲಿನಿಂದ ಹೊರಬಂದ ನಂತರವೂ ಅವನು ಅದೇ ಅಪರಾಧವನ್ನು ಮಾಡುತ್ತಾನೆ. ಆದ್ದರಿಂದ ಅವನು ಜೈಲಿನಲ್ಲಿಯೇ ಕೊಳೆಯಬೇಕೆಂದು ನಾನು ಬಯಸುತ್ತೇನೆ. ಈ ತೀರ್ಪು ಹಲವು ಹೆಣ್ಣುಮಕ್ಕಳಿಗೆ(ಬಲಿಪಶುಗಳು) ಸಿಕ್ಕ ಜಯ. ತೀರ್ಪಿನಿಂದಾಗಿ ನಮ್ಮ ಮೇಲೆ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಡಿಜಿಪಿ ನಮ್ಮ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ” ಎಂದಿದ್ದಾಳೆ.
“ಯೇಶು ಯೇಶು ಪ್ರವಾದಿ” ಎಂದೇ ಖ್ಯಾತರಾದ 42 ವರ್ಷದ ಬಜೀಂದರ್ ಸಿಂಗ್ ಪ್ರಸ್ತುತ ಪಟಿಯಾಲ ಜೈಲಿನಲ್ಲಿದ್ದಾರೆ. ಮಾರ್ಚ್ 28 ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 323 (ಸ್ವಯಂಪ್ರೇರಿತವಾಗಿ ನೋವನ್ನುಂಟುಮಾಡುವ ಶಿಕ್ಷೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಸಿಂಗ್ ರನ್ನು ದೋಷಿ ಎಂದು ಘೋಷಿಸಿ ಕೋರ್ಟ್ ತೀರ್ಪು ನೀಡಿತ್ತು.
ಮೊಹಾಲಿಯ ಜಿರಾಕ್ಪುರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು 2018ರಲ್ಲಿ ಅವರ ವಿರುದ್ಧ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಶಿಕ್ಷೆಯನ್ನು ಘೋಷಿಸಲಾಗಿದೆ. ಬಜಿಂದರ್ ಸಿಂಗ್ ತನ್ನನ್ನು ವಿದೇಶಕ್ಕೆ ಕರೆದೊಯ್ಯುವುದಾಗಿ ಭರವಸೆ ನೀಡಿ, ಆಮಿಷವೊಡ್ಡಿದ್ದ. ಅಲ್ಲದೇ, ಮೊಹಾಲಿಯ ಸೆಕ್ಟರ್ 63ರಲ್ಲಿರುವ ಅವರ ನಿವಾಸದಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಳು.
ಅಲ್ಲದೇ, ನನ್ನ ಮೇಲೆ ಅತ್ಯಾಚಾರಗೈಯ್ಯುತ್ತಿರುವ ವೀಡಿಯೊವನ್ನೂ ಚಿತ್ರೀಕರಿಸಿದ್ದ ಬಜೀಂದರ್ ಸಿಂಗ್, ಅವನ ಬೇಡಿಕೆಗಳಿಗೆ ಒಪ್ಪದಿದ್ದರೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದೂ ಆಕೆ ದೂರಿನಲ್ಲಿ ಆರೋಪಿಸಿದ್ದಾರೆ.
ಇದೇ ವೇಳೆ, ಮಂಗಳವಾರ ತೀರ್ಪು ಪ್ರಕಟವಾಗುವ ಮೊದಲು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ನ್ಯಾಯಾಲಯದ ಸಂಕೀರ್ಣದಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.