ಬೆಂಗಳೂರು: ಅಕ್ರಮ ಚಿನ್ನ ಸಾಗಾಟ (gold smuggling case) ಮಾಡಿ ಸಿಕ್ಕಿ ಹಾಕಿಕೊಂಡಿರುವ ರನ್ಯಾ ರಾವ್ (Ranya Rao) ಕಳ್ಳಾಟ ಒಂದೊಂದೇ ಅಂಶ ಬಯಲಿಗೆ ಬರುತ್ತಿವೆ. ಈಗ ಪ್ರಕರಣದ ಮೂರನೇ ಆರೋಪಿ ಸಾಹಿಲ್ ಜೈನ್ DRI ಮುಂದೆ ಹಲವು ವಿಷಯಗಳನ್ನು ಬಾಯಿ ಬಿಟ್ಟಿದ್ದಾನೆ.
ರನ್ಯಾ ಬರೋಬ್ಬರಿ 49.6 ಕೆಜಿ ಚಿನ್ನ ಸಾಗಿಸಿದ್ದ ಸ್ಫೋಟಕ ವಿಚಾರ ಬಯಲಾಗಿದೆ. ಈ ಚಿನ್ನವನ್ನೆಲ್ಲ ತಂದು ಸಾಹಿಲ್ ಜೈನ್ಗೆ (Sahil Jain) ಕೊಟ್ಟಿದ್ದ ರನ್ಯಾ, ಆತನ ಮೂಲಕವೇ ಮಾರಾಟ ಮಾಡಿಸುತ್ತಿದ್ದಳು. ಅಷ್ಟೇ ಅಲ್ಲ ಚಿನ್ನ ತರಲು 30 ಕೋಟಿ ರೂಪಾಯಿ ಹಣವನ್ನು ಹವಾಲ ಮೂಲಕ ದುಬೈಗೆ ಸಾಗಾಟ ಮಾಡುತ್ತಿದ್ದಳು ಎನ್ನುವುದು ಕೂಡ ಬಯಲಿಗೆ ಬಂದಿದೆ.
ನವೆಂಬರ್ ತಿಂಗಳಿನಿಂದಲೇ ಬರೋಬ್ಬರಿ 49.6 ಕೆಜಿ ಚಿನ್ನ ತಂದು ತನಗೆ ಕೊಟ್ಟಿರುವುದಾಗಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ 3ನೇ ಆರೋಪಿ ಸಾಹಿಲ್ ಜೈನ್ ಡಿಆರ್‌ಐ ಮುಂದೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ರನ್ಯಾ ತಂದುಕೊಟ್ಟಿದ್ದ 49.6 ಕೆಜಿ ಚಿನ್ನವನ್ನು ಸಾಹಿಲ್ ಜೈನ್ ಮಾರಾಟ ಮಾಡಿದ್ದ. ಪ್ರತಿ ಬಾರಿ ದುಬೈನಿಂದ ಬೆಂಗಳೂರಿಗೆ ಚಿನ್ನತಂದು ಮಾರಾಟ ಮಾಡಿದ ನಂತರ ಅದರಿಂದ ಬಂದ ಹಣದಿಂದಲೇ ಮತ್ತೆ ಚಿನ್ನ ಖದೀಗೆ ಹೋಗುತ್ತಿದ್ದಳು. 30 ಕೋಟಿ ರೂ. ಹಣ ಹವಾಲ ಮೂಲಕ ದುಬೈಗೆ ಸಾಗಾಟವಾಗಿರುವ ಮಾಹಿತಿ ಲಭ್ಯವಾಗಿದೆ.
ಪ್ರತಿ ಬಾರಿ ದುಬೈಗೆ ಹವಾಲ ಮೂಲಕ ಹಣ ರವಾನಿಸುವ ಕೆಲಸವನ್ನು ಸಾಹಿಲ್ ಜೈನ್ ಮೂಲಕ ಮಾಡಿಸುತ್ತಿದ್ದಳು. ಇದಕ್ಕೂ ಮುನ್ನ ಜನವರಿಯಲ್ಲಿ 55 ಲಕ್ಷ ರೂ, ಫೆಬ್ರವರಿಯಲ್ಲಿ 55 ಲಕ್ಷ, ಮತ್ತೊಮ್ಮೆ 30 ಲಕ್ಷ ಸೇರಿ ಒಟ್ಟು 1,73,61,787 ರೂ ಹಣವನ್ನು ಮನೆಗೆ ಹವಾಲ ಮೂಲಕ ತರಿಸಿಕೊಂಡಿದ್ದಾಳೆ. ಪ್ರತಿ ಬಾರಿಯ ಹವಾಲಾ ವಹಿವಾಟಿಗೆ ಸಾಹಿಲ್ ಜೈನ್ ಐವತ್ತೈದು ಸಾವಿರ ಕಮಿಷನ್ ಪಡೆಯುತ್ತಿದ್ದ ಎನ್ನಲಾಗಿದೆ.
ಬಳ್ಳಾರಿ (Ballari) ಮೂಲದ ಸಾಹಿಲ್ ಜೈನ್ ರನ್ಯಾ ರಾವ್ ಜೊತೆಗೆ ವಾಟ್ಸಪ್ ಚಾಟಿಂಗ್ ಮಾಡಿದ್ದ ಹಿನ್ನೆಲೆ ಸಾಹಿಲ್ ಜೈನ್ ಲಾಕ್ ಆಗಿದ್ದ.