ಹುಬ್ಬಳ್ಳಿ : ಪ್ರತಿಷ್ಠಿತ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯವು ಈಗ ಕೇವಲ ಬ್ಯಾಟ್ ಮತ್ತು ಚೆಂಡಿನ ನಡುವಿನ ಹೋರಾಟ ಎಂಬುದನ್ನು ಮರೆಯುವಂತೆ ಮಾಡಿದೆ. ಹುಬ್ಬಳ್ಳಿಯಲ್ಲಿ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ತಂಡಗಳ ನಡುವೆ ನಡೆಯುತ್ತಿರುವ ಹೈ-ವೋಲ್ಟೇಜ್ ಪಂದ್ಯದ ಎರಡನೇ ದಿನದಂದು ಜಮ್ಮು-ಕಾಶ್ಮೀರ ತಂಡದ ನಾಯಕ ಪಾರಸ್ ಡೋಗ್ರಾ ಮತ್ತು ಕರ್ನಾಟಕದ ಸಬ್‌ಸ್ಟಿಟ್ಯೂಟ್ ಫೀಲ್ಡರ್ ಕೆ.ವಿ. ಅನೀಶ್ ನಡುವೆ ನಡೆದ ಆನ್-ಫೀಲ್ಡ್ ಘರ್ಷಣೆ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಪಂದ್ಯದ ಎರಡನೇ ದಿನದಂದು 101ನೇ ಓವರ್‌ನಲ್ಲಿ ಈ ಅಹಿತಕರ ಘಟನೆ ಸಂಭವಿಸಿದೆ. ಪ್ರಸಿದ್ಧ್ ಕೃಷ್ಣ ಎಸೆದ ಶಾರ್ಟ್ ಪಿಚ್ ಎಸೆತವೊಂದು ಡೋಗ್ರಾ ಅವರ ಬ್ಯಾಟ್‌ನ ಅಂಚು ಸವರಿ ಬೌಂಡರಿ ಗೆರೆ ದಾಟಿತು. ಈ ವೇಳೆ ಸಿಲ್ಲಿ ಪಾಯಿಂಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕರ್ನಾಟಕದ ಕೆ.ವಿ. ಅನೀಶ್ ಮತ್ತು ಇತರ ಆಟಗಾರರಿಂದ ಸ್ಲೆಡ್ಜಿಂಗ್ (ಚುಡಾಯಿಸುವಿಕೆ) ನಡೆದಿದೆ ಎನ್ನಲಾಗಿದೆ. ಇದರಿಂದ ಕೆರಳಿದ ನಾಯಕ ಪಾರಸ್ ಡೋಗ್ರಾ, ನೇರವಾಗಿ ಅನೀಶ್ ಬಳಿ ನಡೆದು ಹೋಗಿ ತಮ್ಮ ಹೆಲ್ಮೆಟ್‌ನಿಂದ ಅನೀಶ್ ಅವರ ಹೆಲ್ಮೆಟ್‌ಗೆ ಗುದ್ದಿದ್ದಾರೆ (Headbutt).
ಈ ಅನಿರೀಕ್ಷಿತ ವರ್ತನೆಯಿಂದ ಮೈದಾನದಲ್ಲಿ ಕ್ಷಣಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ತಕ್ಷಣವೇ ಮಧ್ಯಪ್ರವೇಶಿಸಿದ ಕರ್ನಾಟಕದ ಹಿರಿಯ ಆಟಗಾರ ಮಯಾಂಕ್ ಅಗರ್ವಾಲ್ ಇಬ್ಬರನ್ನು ಸಮಾಧಾನಪಡಿಸಿ ದೂರ ಸರಿಸಿದರು. ಬಳಿಕ ಕರ್ನಾಟಕದ ನಾಯಕ ದೇವದತ್ ಪಡಿಕ್ಕಲ್ ಮತ್ತು ಅಂಪೈರ್‌ಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ನಾಯಕನಿಗೆ ದಂಡದ ಬಿಸಿ?
ಕ್ರೀಡಾ ಸ್ಫೂರ್ತಿಗೆ ಧಕ್ಕೆ ತಂದ ಈ ವರ್ತನೆಗಾಗಿ ಮ್ಯಾಚ್ ರೆಫರಿ ನಾರಾಯಣನ್ ಕುಟ್ಟಿ ಅವರು ಪಾರಸ್ ಡೋಗ್ರಾ ಅವರಿಗೆ ಪಂದ್ಯದ ಸಂಭಾವನೆಯಲ್ಲಿ (Match Fees) ಶೇಕಡಾ 50 ರಷ್ಟು ದಂಡ ವಿಧಿಸುವ ಸಾಧ್ಯತೆಯಿದೆ. ಈ ಬಗ್ಗೆ ಅಧಿಕೃತ ಆದೇಶ ಇನ್ನಷ್ಟೇ ಹೊರಬೀಳಬೇಕಿದೆ. ಆದರೆ, ಈ ಘಟನೆಯನ್ನು ಕೇವಲ ‘ಆಟದ ಭರದಲ್ಲಿ ನಡೆದ ಆವೇಶ’ ಎಂದು ಪರಿಗಣಿಸಲಾಗಿದೆಯೇ ಹೊರತು, ಯಾವುದೇ ದುರುದ್ದೇಶಪೂರಿತ ದಾಳಿ ಎಂದು ಪರಿಗಣಿಸಲಾಗಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾರಸ್ ಡೋಗ್ರಾ, “ನನಗೆ ಅಷ್ಟಾಗಿ ಸಿಟ್ಟು ಬರುವುದಿಲ್ಲ, ಆದರೆ ಪಂದ್ಯದ ಸಮಯದಲ್ಲಿ ಕೆಲವೊಮ್ಮೆ ಇಂತಹ ಘಟನೆಗಳು ಸಹಜ. ಒಂದು ಕ್ಷಣ ಸಿಟ್ಟು ಬಂದಿತ್ತು, ಆದರೆ ಈಗ ಎಲ್ಲವೂ ಸರಿ ಹೋಗಿದೆ” ಎಂದು ಘಟನೆಯನ್ನು ಲಘುವಾಗಿ ತಳ್ಳಿಹಾಕಿದ್ದಾರೆ.
ಜಮ್ಮು-ಕಾಶ್ಮೀರ ಬೃಹತ್ ಮೊತ್ತ: ಕರ್ನಾಟಕಕ್ಕೆ ಸವಾಲು
ಮೈದಾನದ ಹೊರಗಿನ ಈ ಕಿತ್ತಾಟದ ನಡುವೆಯೂ ಜಮ್ಮು-ಕಾಶ್ಮೀರ ತಂಡವು ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿತು. ಮೊದಲ ದಿನ ಗಾಯಗೊಂಡು ನಿವೃತ್ತರಾಗಿದ್ದ ಡೋಗ್ರಾ, ಮತ್ತೆ ಕ್ರೀಸ್‌ಗೆ ಬಂದು 70 ರನ್‌ಗಳ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. ತಂಡದ ಕೆಳಹಂತದ ಬ್ಯಾಟರ್ ಸಾಹಿಲ್ ಲೋತ್ರಾ ಅವರ ಸಮಯೋಚಿತ 72 ರನ್‌ಗಳ ನೆರವಿನಿಂದ ಜಮ್ಮು-ಕಾಶ್ಮೀರ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 584 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿದೆ. ಕರ್ನಾಟಕದ ಪರ ಶ್ರೇಯಸ್ ಗೋಪಾಲ್ ಅವರು ಡೋಗ್ರಾ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಸದ್ಯ ಕರ್ನಾಟಕದ ಮೈದಾನದಲ್ಲಿ ಅತಿಥಿ ತಂಡವೇ ಮೇಲುಗೈ ಸಾಧಿಸಿದಂತೆ ಕಾಣುತ್ತಿದೆ. 584 ರನ್‌ಗಳ ಈ ಬೆಟ್ಟದಂತಹ ಮೊತ್ತವನ್ನು ಬೆನ್ನಟ್ಟಲು ಕರ್ನಾಟಕ ತಂಡವು ಈಗ ತನ್ನ ಬ್ಯಾಟಿಂಗ್ ಶಕ್ತಿಯನ್ನು ಪ್ರದರ್ಶಿಸಬೇಕಿದೆ.
ಇದನ್ನೂ ಓದಿ : “ತಲೆದಂಡವಾಗಲೇಬೇಕು!” | NCERT ಪಠ್ಯಪುಸ್ತಕ ನಿಷೇಧಿಸಿ ಸುಪ್ರೀಂ ಕೋರ್ಟ್ ಆಕ್ರೋಶ



















