ಬೆಂಗಳೂರು: ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಪಿ ರಾಮಚಂದ್ರ ರಾವ್ ಗೆ ಕಡ್ಡಾಯ ರಜೆ ಮೇಲೆ ತೆರಳಲು ಸರ್ಕಾರ ಸೂಚನೆ ನೀಡಿದೆ.
ರನ್ಯಾ ರಾವ್, ಡಿಜಿಪಿ ರಾಮಚಂದ್ರ ರಾವ್ ಅವರ ಮಲಮಗಳು. ಈ ಪ್ರಕರಣವನ್ನು ಈಗಾಗಲೇ ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ರಾಮಚಂದ್ರ ರಾವ್ ಪಾತ್ರದ ಬಗ್ಗೆ ಕೂಡ ಸಂಶಯ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಕೂಡ ನಡೆಸಲಾಗುತ್ತಿದೆ. ಈ ಮಧ್ಯೆ ರನ್ಯಾ ಪ್ರಕರಣದ ತನಿಖೆ ಪೂರ್ಣ ಮುಗಿಯುವವರೆಗೆ ಕಡ್ಡಾಯ ರಜೆ ತೆಗೆದುಕೊಳ್ಳುವಂತೆ ಸರ್ಕಾರ ಸೂಚಿಸಿದೆ.

ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತನಿಖೆ ಮುಗಿಯುವವರೆಗೂ ರಜೆ ಮೇಲೆ ತೆರಳಲು ಸೂಚನೆ ನೀಡಲಾಗಿದೆ. ಡಿಜಿಪಿ ರಾಮಚಂದ್ರರಾವ್ ಸ್ಥಾನಕ್ಕೆ ಎಡಿಜಿಪಿ ಶರತ್ ಚಂದ್ರ ಅವರನ್ನು ವರ್ಗಾವಣೆ ಮಾಡಲಾಗಿದೆ. ಅಲ್ಲದೇ, ರಾಮಚಂದ್ರ ರಾವ್ ಅವರನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿರ್ಮಾಣ ಸಂಸ್ಥೆ ಎಂಡಿ ಯಾಗಿ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಡಿಜಿಪಿ ರಾಮಚಂದ್ರರಾವ್ ಪೊಲೀಸ್ ವಸತಿ ನಿರ್ಮಾಣ ಸಂಸ್ಥೆ ಎಂಡಿಯಾಗಿದ್ದರು.