ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಹತ್ತಾರು ಬದಲಾವಣೆಗೆ ಕಣಿವೆ ಸಾಕ್ಷಿಯಾಗುತ್ತಿದೆ. ಅದರಲ್ಲೂ, ಶ್ರೀನಗರದಲ್ಲಿ ತಿರಂಗಾ ಹಾರಿಸುವುದು, ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸುವುದು ಸೇರಿ ಹಲವು ಚಟುವಟಿಕೆಗಳು ನಡೆಯುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಕಾಶ್ಮೀರದಲ್ಲಿ 30 ವರ್ಷಗಳ ಬಳಿಕ ರಾಮನವಮಿ (Ram Navami) ಆಚರಣೆ ಮಾಡಲಾಗಿದೆ.
ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆ ಬ್ರರಿಂಗ್ನಾನ್ ಎಂಬಲ್ಲಿರುವ ಉಮಾ ಭಗವತಿ ದೇವಸ್ಥಾನದಲ್ಲಿ 35 ವರ್ಷಗಳ ಬಳಿಕ ಮೊದಲ ಬಾರಿಗೆ ಭಾನುವಾರ ರಾಮನವಮಿ ಆಚರಿಸಲಾಗಿದೆ. ಅದರಲ್ಲೂ, ದೇವಾಲಯದಲ್ಲಿ ಹಿಂದೂ-ಮುಸ್ಲಿಮರು ಒಗ್ಗೂಡಿ ರಾಮನವಮಿಯನ್ನು ಆಚರಿಸಿರುವ ಮೂಲಕ ಸೌಹಾರ್ದತೆಯ ಸಂದೇಶ ಸಾರಲಾಗಿದೆ.
ಉಮಾ ಭಗವತಿ ದೇವಾಲಯದಲ್ಲಿ 35 ವರ್ಷಗಳ ಹಿಂದೆ ಅಂದರೆ 1990ರಲ್ಲಿ ರಾಮನವಮಿಯ ಆಚರಣೆಯನ್ನು ನಿಲ್ಲಿಸಲಾಗಿತ್ತು. ಉಗ್ರರ ಉಪಟಳದ ಹಿನ್ನೆಲೆಯಲ್ಲಿ ದೇವಾಲಯವನ್ನೇ ಮುಚ್ಚಲಾಗಿತ್ತು. ಒಂದು ವರ್ಷದ ಹಿಂದೆ ದೇವಾಲಯವನ್ನು ತೆರೆಯಲಾಗಿತ್ತು. ಈಗ ದೇವಾಲಯದಲ್ಲಿ 35 ವರ್ಷಗಳ ಬಳಿಕ ಅದ್ಧೂರಿಯಾಗಿ ರಾಮನವಮಿಯನ್ನು ಆಚರಣೆ ಮಾಡಲಾಗಿದೆ.
ಅನಂತನಾಗ್ ಮಾತ್ರವಲ್ಲ, ಶ್ರೀನಗರ ಸೇರಿ ಹಲವೆಡೆ ರಾಮನವಮಿಯನ್ನು ಆಚರಿಸಲಾಗಿದೆ. ಶ್ರೀನಗರದಲ್ಲಿ ಇಸ್ಕಾನ್ ವತಿಯಿಂದ ಬೃಹತ್ ಶೋಭಾಯಾತ್ರೆಯನ್ನು ಆಯೋಜಿಸಲಾಗಿತ್ತು. ರಾಮನ ಭಜನೆ ಮಾಡುತ್ತ ಶ್ರೀನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆಯನ್ನು ಕೈಗೊಳ್ಳಲಾಯಿತು. ರಾಮ, ಲಕ್ಷ್ಮಣ ಹಾಗೂ ಸೀತೆಯ ನಾಮಜಪವನ್ನು ಭಕ್ತರು ಮಾಡಿದರು. ಜಮ್ಮುವಿನ ರಘುನಾಥ ದೇವಾಲಯ ಸೇರಿ ಹಲವೆಡೆಯೂ ರಾಮನಾಮ ಕೇಳಿಬಂದಿತು.