ಹೈದರಾಬಾದ್: ತೆಲುಗು ಚಿತ್ರರಂಗದ ಮೆಗಾ ಫ್ಯಾಮಿಲಿ ಮತ್ತೆ ಸುದ್ದಿಯಲ್ಲಿದೆ. ಈ ಕುಟುಂಬದ ಸದಸ್ಯರ ನಡುವೆ ಬಿರುಕು ಉಂಟಾಗಿದೆ ಎಂಬ ಗುಸುಗುಸು ನಡುವೆಯೇ ರಾಮ್‌ಚರಣ್ ಮತ್ತು ಅಲ್ಲು ಅರ್ಜುನ್ ನಡುವೆ “ಇನ್‌ಸ್ಟಾ ಅನ್‌ಫಾಲೋ” ಆಟ ಆರಂಭವಾಗಿದೆ. ಮೆಗಾ ಕುಟುಂಬದ ಬಗ್ಗೆ ಅಲ್ಲು ಅಸಮಾಧಾನ ಹೊಂದಿದ್ದಾರೆ ಎಂಬ ವದಂತಿ ಹಬ್ಬಿರುವಂತೆಯೇ ರಾಮ್‌ಚರಣ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅಲ್ಲು ಅರ್ಜುನ್‌ರನ್ನು ಅನ್ ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿದೆ. ಗೇಮ್ ಚೇಂಜರ್ ನಟನ ಇನ್‌ಸ್ಟಾ ಖಾತೆ ಹೊಕ್ಕು ನೋಡಿದರೆ, ಅವರು ಅಲ್ಲು ಅರ್ಜುನ್‌ರನ್ನು ಫಾಲೋ ಮಾಡುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಆದರೆ, ಅಚ್ಚರಿಯೆಂದರೆ, ರಾಮ್‌ಚರಣ್ ಅವರು ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರಿಶ್ ಅವರನ್ನು ಫಾಲೋ ಮಾಡುತ್ತಿದ್ದಾರೆ. ಇನ್ನು, ಅಲ್ಲು ಅವರು ಮೊದಲಿನಿಂದಲೂ ತಮ್ಮ ಪತ್ನಿ ಸ್ನೇಹ ರೆಡ್ಡಿಯವರನ್ನು ಹೊರತುಪಡಿಸಿ ಬೇರಾರನ್ನೂ ಫಾಲೋ ಮಾಡುತ್ತಿಲ್ಲ.
ಈ ಬೆಳವಣಿಗೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಊಹಾಪೋಹಗಳು ಹರಿದಾಡುತ್ತಿದ್ದರೂ, ಅಲ್ಲು-ಚರಣ್ ವಿರಸಕ್ಕೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ. ರಾಮ್‌ಚರಣ್ ಅವರ ನಟನೆಯ ಗೇಮ್ ಚೇಂಜರ್ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ತೋರದ ಬಗ್ಗೆ ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರು ಗೇಲಿ ಮಾಡುವಂತೆ ಮಾತನಾಡಿದ್ದರು ಎನ್ನಲಾಗಿದ್ದು, ಅವರ ಹೇಳಿಕೆಗಳೇ ರಾಮ್‌ಚರಣ್ ಸಿಟ್ಟಿಗೆ ಕಾರಣ ಎಂದು ನೆಟ್ಟಿಗರು ವಿಶ್ಲೇಷಿಸತೊಡಗಿದ್ದಾರೆ.
ಆದರೆ, ಮೆಗಾ ಕುಟುಂಬದ ಯಾವೊಬ್ಬ ಸದಸ್ಯರೂ ಸಾರ್ವಜನಿಕವಾಗಿ ತಮ್ಮ ಕುಟುಂಬದೊಳಗೆ ಎದ್ದಿರುವ ಅಪಸ್ವರದ ಬಗ್ಗೆ ತುಟಿಬಿಚ್ಚಿಲ್ಲ. ಹಾಗೆ ನೋಡಿದರೆ, ಕೆಲವು ದಿನಗಳ ಹಿಂದಷ್ಟೇ ಇದೇ ಕುಟುಂಬದ ಹಿರಿಯ ಸದಸ್ಯ ಚಿರಂಜೀವಿ ಅವರು ಪುಷ್ಪ-2 ಯಶಸ್ಸಿನ ಬಗ್ಗೆ ಮಾತನಾಡುತ್ತಾ ಅಲ್ಲು ಅರ್ಜುನ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಲೈಲಾ ಚಿತ್ರಕ್ಕೆ ಸಂಬಂಧಿಸಿದ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಚಿರಂಜೀವಿ ಅವರು, ಹೀರೋಗಳ ಮಧ್ಯೆ ಅನಗತ್ಯ ಶತ್ರುತ್ವವನ್ನು ಸೃಷ್ಟಿಸುವ ಬದಲು ಎಲ್ಲ ಮೆಗಾ ಹೀರೋಗಳನ್ನೂ ನಿಮ್ಮವರೆಂದು ಪೋಷಿಸಿ, ಬೆಳೆಸಿ ಎಂದು ಅಭಿಮಾನಿಗಳಿಗೆ ಸಲಹೆ ನೀಡಿದ್ದರು. “ಎಲ್ಲರೂ ಸದಾ ಒಟ್ಟಿಗೆ ಇರಬೇಕು. ನಮ್ಮ ಮನೆಯಲ್ಲೂ ಅನೇಕ ಹೀರೋಗಳಿದ್ದಾರೆ. ನಾವು ಪ್ರತಿ ಬಾರಿಯೂ ಒಟ್ಟಿಗೆ ಸೇರಿ, ಸಂಭ್ರಮಿಸುತ್ತೇವೆ. ಇದನ್ನು ಹೇಳಿಕೊಳ್ಳುವುದರಿಂದ ನಮ್ಮ ಇಮೇಜ್‌ಗೇನಾದರೂ ಧಕ್ಕೆ ಆಗುತ್ತದೆಯೇ? ಇಲ್ಲವಲ್ಲ, ಪವನ್ ಕಲ್ಯಾಣ್ ಎವಿಯಲ್ಲಿ ಕಾಣಿಸಿಕೊಂಡ ಕೂಡಲೇ ಹೇಗೆ ಎಲ್ಲರೂ ಶಿಳ್ಳೆ ಹೊಡೆಯಲಾರಂಭಿಸದು? ನಾನು ಅದರ ಬಗ್ಗೆ ಹೆಮ್ಮೆ ಪಡಬೇಕು. ಪುಷ್ಪಾ- 2 ಚಿತ್ರ ದೊಡ್ಡ ಹಿಟ್ ಆಯಿತು. ಆ ಬ್ಲಾಕ್‌ಬಸ್ಟರ್ ಬಗ್ಗೆಯೂ ನನಗೆ ಹೆಮ್ಮೆ ಇದೆ!” ಎಂದು ಚಿರಂಜೀವಿ ಹೇಳಿದ್ದರು.