ಕನ್ನಡ ಚಿತ್ರರಂಗದ ನಗೆಯ ಬೊಗಸೆಯೊಂದು ಬರಿದಾಗಿದೆ. ಉತ್ತರ ಕರ್ನಾಟಕದ ಜವಾರಿ ಪ್ರತಿಭೆ, ರಂಗಭೂಮಿ ಮತ್ತು ಬೆಳ್ಳಿತೆರೆಯ ಅದ್ಭುತ ಕಲಾವಿದ, ರಾಜು ತಾಳಿಕೋಟೆ ಅವರು ಇಹಲೋಕ ತ್ಯಜಿಸಿದ್ದಾರೆ. ಸದ್ಯ ಈ ಸುದ್ದಿ ಕೇಳಿ ಇಡೀ ಕರುನಾಡು ಸ್ತಬ್ಧವಾಗಿದೆ. ರಾಜು ತಾಳಿಕೋಟೆ ಅವರ ಹಠಾತ್ ನಿಧನಕ್ಕೆ ಸ್ಯಾಂಡಲ್‌ವುಡ್ ಕಂಬನಿ ಮಿಡಿದಿದೆ.
ಇಂದು ಅಂತ್ಯಕ್ರಿಯೆ : ರಾಜು ತಾಳಿಕೋಟೆ ಅವರ ಅಂತಿಮ ಸಂಸ್ಕಾರವು ವಿಜಯಪುರ ಜಿಲ್ಲೆಯ ಚಿಕ್ಕಸಿಂಧಗಿ ಗ್ರಾಮದ ಅವರ ತೋಟದಲ್ಲಿ ನಡೆಯಲಿದೆ ಎಂದು ಪುತ್ರ ಭರತ್ ಮಾಹಿತಿ ನೀಡಿದ್ದಾರೆ.
ತಂದೆಯವರ ಮೃತದೇಹವನ್ನು ಮೊದಲು ಧಾರವಾಡ ರಂಗಾಯಣಕ್ಕೆ ತೆಗೆದುಕೊಂಡು ಹೋಗುತ್ತೇವೆ. ರಾಜುತಾಳಿಕೋಟಿ ಅವರು ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದರು. 35 ವರ್ಷಗಳಿಂದ ರಂಗಸೇವೆ ಮಾಡಿದ್ದಾರೆ. ಅಲ್ಲಿ ರಂಗಾಯಣದ ಸದಸ್ಯರು, ಚಿತ್ರರಂಗ ಮತ್ತು ಕುಟುಂಬಸ್ಥರ ಅಂತಿಮನಮನ ಸಲ್ಲಿಕೆ ಬಳಿಕ ಬಿಜಾಪುರದ ಸಿಂಧಗಿ ತಾಲೂಕಿನ ಚಿಕ್ಕಸಿಂಧಗಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಅವರು ಯಾವತ್ತೂ ತೋಟದಲ್ಲಿ ಕಾಲ ಕಳೆಯುತ್ತಿದ್ದರು. ಹೀಗಾಗಿ ಅವರ ಇಷ್ಟದಂತೆ ಅಲ್ಲೇ ಅಂತ್ಯ ಸಂಸ್ಕಾರ ಮಾಡುತ್ತೇವೆ. ಅವರ ಪ್ರೀತಿಸುವವರು ಅಭಿಮಾನಿಗಳು, ಸಂಬಂಧಿಕರು, ಚಿಕ್ಕ ಸಿಂಧಗಿಗೆ ಬಂದು ದರ್ಶನ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.