ನಟ ರಜನೀಕಾಂತ್ ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದ್ದು, ವೈದ್ಯರು ಅಪ್ಡೇಟ್ ನೀಡಿದ್ದಾರೆ.
ರಜನೀಕಾಂತ್ ಎವರಿಗೆ ಎದುರಾಗಿರುವ ಆರೋಗ್ಯ ಸಮಸ್ಯೆ ಏನು ಎಂಬ ಬಗ್ಗೆ ಈಗ ಆಸ್ಪತ್ರೆಯ ಕಡೆಯಿಂದಲೇ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದೆ. ಅದಕ್ಕೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ತನಾಳ ಉಬ್ಬಿದ್ದರಿಂದ ಸ್ಟೆಂಟ್ ಹಾಕಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ರಜನಿಕಾಂತ್ ಅವರನ್ನು ಅಪೋಲೋ ಆಸ್ಪತ್ರೆಗೆ ಸೆಪ್ಟೆಂಬರ್ 30ರಂದು ದಾಖಲಿಸಲಾಗಿತ್ತು. ರಕ್ತನಾಳದಲ್ಲಿ ಊತ ಕಾಣಿಸಿಕೊಂಡಿತ್ತು. ಅದಕ್ಕೆ ಚಿಕಿತ್ಸೆ ನೀಡಲಾಗಿದೆ. ಹಿರಿಯ ವೈದ್ಯ ಡಾ. ಸಾಯಿ ಸತೀಶ್ ಅವರು ರಜನಿಕಾಂತ್ ಅವರಿಗೆ ಸ್ಟೆಂಟ್ ಹಾಕಿದ್ದಾರೆ. ಸದ್ಯ ರಜನೀಕಾಂತ್ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.
ರಜನೀಕಾಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ ಅಭಿಮಾನಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಬೇಗ ರಜನೀಕಾಂತ್ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಸದ್ಯ ರಜನಿ ಆರೋಗ್ಯವಾಗಿರುವ ವಿಷಯ ಕೇಳಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. 73 ವರ್ಷದ ರಜನೀಕಾಂತ್ ವಯೋಸಹಜ ಕಾಯಿಲೆಯಿಂದ ಕೂಡ ಇತ್ತೀಚೆಗೆ ಬಳಲುತ್ತಿದ್ದಾರೆ.