ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಪಾರಂಪರಿಕ ಕಟ್ಟಡದ ಮುಂದೆ ಬಿಗ್‌ಬಾಸ್ ಖ್ಯಾತಿಯ ರಜತ್ ಕಿಶನ್ ಸಿಗರೇಟ್ ಸೇದುತ್ತಾ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ರಜತ್ ಅವರ ಈ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಹೌದು.. ಮೈಸೂರಿನ ಪ್ರಮುಖ ಪಾರಂಪರಿಕ ಕಟ್ಟಡವಾದ ಹಳೇ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ರಜತ್ ಇತ್ತೀಚೆಗೆ ಫೋಟೋಶೂಟ್ ಮಾಡಿಸಿದ್ದು, ಕಾರಿನಿಂದ ಕೆಳಗಿಳಿದು ಕೈಯಲ್ಲಿ ಸಿಗರೇಟ್ ಹಿಡಿದು ಹೊಗೆ ಬಿಡುತ್ತಾ, ಯಾವುದೋ ಸಿನೆಮಾದ ವಿಲನ್ ರೀತಿ ಫೋಸ್ ನೀಡಿರುವ ವಿಡಿಯೋ ಹಾಗೂ ಫೋಟೋಗಳನ್ನು ರಜತ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಾನೂನುಬಾಹಿರ ಎಂಬ ಸಾಮಾನ್ಯ ಜ್ಞಾನವಿದ್ದರೂ, ಕೇವಲ ಶೋಕಿಗಾಗಿ ಮತ್ತು ರೀಲ್ಸ್ ಪ್ರಚಾರಕ್ಕಾಗಿ ರಜತ್ ಈ ರೀತಿ ಮಾಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಪಾರಂಪರಿಕ ಕಟ್ಟಡದ ಗರಿಮೆಗೆ ಧಕ್ಕೆ ತರುವಂತೆ ವರ್ತಿಸಿರುವುದು ಮೈಸೂರಿಗರ ಆಕ್ರೋಶಕ್ಕೆ ಕಾರಣವಾಗಿದೆ.
“ಜೈಲಿಗೆ ಹೋಗಿ ಬಂದರೂ ರಜತ್‌ಗೆ ಬುದ್ಧಿ ಬಂದಿಲ್ಲವೇ?” ಎಂದು ನೆಟ್ಟಿಗರು ಕಾಮೆಂಟ್ ಮೂಲಕ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪಾರಂಪರಿಕ ತಾಣದಲ್ಲಿ ಧೂಮಪಾನ ಮಾಡಿ ಕಾನೂನು ಉಲ್ಲಂಘಿಸಿದ ರಜತ್ ವಿರುದ್ಧ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರಿನಲ್ಲಿ ಏನಿದೆ?
ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಈ ದೂರನ್ನು ನೀಡಿದ್ದಾರೆ. ರಜತ್ ವಿರುದ್ದ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಲಾಗಿದೆ. ‘ರಜತ್ ಪಾರಂಪರಿಕ ಕಟ್ಟಡದ ಮುಂದೆ ಅನುಮತಿ ಪಡೆಯದೆ ವಿಡಿಯೋ ಮಾಡಿದ್ದಾರೆ. ಸಿಗರೇಟ್ ಹಿಡಿದು ಕಾರಿನಿಂದ ಇಳಿದಿದ್ದಾರೆ. ಇದು ಅವರ ಫಾಲೋರ್ಸ್‌ಗೆ ಕೆಟ್ಟ ಸಂದೇಶ ನೀಡುತ್ತದೆ. ಈ ಮೊದಲು ಕೂಡ ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕೆ ಎಫ್ಐಅರ್ ದಾಖಲಾಗಿತ್ತು. ಇದೀಗ ಮತ್ತೆ ಅದೇ ರೀತಿ ಮಾಡಿದ್ದಾರೆ. ಅವರ ವಿರುದ್ದ ಕ್ರಮ ಕೈಗೊಳ್ಳಿ’ ಎಂದು ದೂರಿನಲ್ಲಿ ಕೋರಲಾಗಿದೆ.
ಈ ಹಿಂದೆಯೂ ವಿವಾದಕ್ಕೆ ಸಿಲಕಿದ್ದ ರಜತ್ |
ರಜತ್ ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಶೂಟಿಂಗ್ ಸೆಟ್ ಒಂದರಲ್ಲಿ ಮಾರಕಾಸ್ತ್ರ (ಮಚ್ಚು) ಹಿಡಿದು ಫೋಟೋಶೂಟ್ ಮಾಡಿಸಿಕೊಂಡಿದ್ದಕ್ಕಾಗಿ ಪೊಲೀಸರು ಅವರನ್ನು ಬಂಧಿಸಿದ್ದರು. ಆ ಪ್ರಕರಣದಲ್ಲಿ ಜೈಲು ಸೇರಿ ಇತ್ತೀಚೆಗಷ್ಟೇ ಬೇಲ್ ಮೇಲೆ ಹೊರಬಂದಿರುವ ರಜತ್, ಈಗ ಮತ್ತೆ ಇಂತಹ ಬೇಜವಾಬ್ದಾರಿ ವರ್ತನೆ ತೋರುತ್ತಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. .
ಇದನ್ನೂ ಓದಿ : ಅಕ್ರಮ ಹಣ ವರ್ಗಾವಣೆ ಕೇಸ್ | ಶಾಸಕ ಸತೀಶ್ ಸೈಲ್‌ಗೆ ವೈದ್ಯಕೀಯ ಜಾಮೀನು ಮಂಜೂರು!



















