ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ನಡೆಸಿದ ಆಪರೇಷನ್ ಸಿಂಧೂರದಿಂದ(Operation Sindoor) ನಲುಗಿರುವ ಪಾಕಿಸ್ತಾನ ಈಗ ಮೈಪರಚಿಕೊಳ್ಳುತ್ತಿದೆ. ಭಾರತದ ಮೇಲೆ ಹೇಗೆ ಪ್ರತೀಕಾರ ತೀರಿಸಬೇಕೆಂದು ತಿಳಿಯದೇ ಪಾಪಿ ಪಾಕ್ ಕಂಗಾಲಾಗಿದೆ. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕ್ ಪಡೆ ಶೆಲ್ ದಾಳಿ ನಡೆಸುವುದನ್ನು ಮುಂದುವರಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗಡಿ ರಾಜ್ಯಗಳಾದ ರಾಜಸ್ಥಾನ ಮತ್ತು ಪಂಜಾಬ್ ನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಪಾಕಿಸ್ತಾನದ ಕಡೆಯಿಂದ ದಾಳಿ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತಗಳು ಅದನ್ನು ಎದುರಿಸಲು ಸಜ್ಜಾಗುತ್ತಿವೆ. ಎಲ್ಲಾ ಪೊಲೀಸ್ ಸಿಬ್ಬಂದಿಯ ರಜೆಗಳನ್ನು ರದ್ದುಗೊಳಿಸಲಾಗಿದೆ ಮತ್ತು ಗಡಿ ಪ್ರದೇಶಗಳಲ್ಲಿ ಸಾರ್ವಜನಿಕರ ಚಲನವಲನಗಳನ್ನು ನಿರ್ಬಂಧಿಸಲಾಗಿದೆ. ಯಾವುದೇ ದಾಳಿಯನ್ನು ಎದುರಿಸಲು ಕ್ಷಿಪಣಿಗಳೂ ಸಜ್ಜಾಗಿ ನಿಂತಿವೆ.
ಪಾಕಿಸ್ತಾನದೊಂದಿಗೆ 1,037 ಕಿ.ಮೀ ಗಡಿಯನ್ನು ಹಂಚಿಕೊಂಡಿರುವ ರಾಜಸ್ಥಾನದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ಗುರುತಿಸಿದರೆ ಗಡಿ ಭದ್ರತಾ ಪಡೆ ಸಿಬ್ಬಂದಿಗೆ ಸ್ಥಳದಲ್ಲೇ ಗುಂಡು ಹಾರಿಸಲು ಆದೇಶ ನೀಡಲಾಗಿದೆ.
ಭಾರತೀಯ ವಾಯುಪಡೆಯೂ ಅಲರ್ಟ್ ಆಗಿದೆ. ಜೋಧಪುರ, ಕಿಶನ್ಗಡ್ ಮತ್ತು ಬಿಕಾನೇರ್ ವಿಮಾನ ನಿಲ್ದಾಣಗಳಿಂದ ವಿಮಾನ ಸಂಚಾರವನ್ನು ಮೇ 9ರವರೆಗೆ ಸ್ಥಗಿತಗೊಳಿಸಲಾಗಿದೆ. ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಸುಖೋಯ್ -30 ಎಂಕೆಐ ಯುದ್ಧ ವಿಮಾನಗಳು ಗಂಗಾನಗರದಿಂದ ರಣ್ ಆಫ್ ಕಚ್ ವರೆಗೆ ವಾಯು ಗಸ್ತು ನಡೆಸುತ್ತಿವೆ. ಬಿಕಾನೇರ್, ಶ್ರೀ ಗಂಗಾನಗರ, ಜೈಸಲ್ಮೇರ್ ಮತ್ತು ಬಾರ್ಮರ್ ಜಿಲ್ಲೆಗಳಲ್ಲಿ ಎಲ್ಲ ಶಾಲೆಗಳಿಗೂ ರಜೆ ಘೋಷಿಸಲಾಗಿದೆ ಮತ್ತು ನಡೆಯುತ್ತಿರುವ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪೊಲೀಸರು ಮತ್ತು ರೈಲ್ವೆ ಸಿಬ್ಬಂದಿಯ ರಜೆಗಳನ್ನೂ ರದ್ದುಪಡಿಸಲಾಗಿದೆ.
ಗಡಿ ಗ್ರಾಮಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ. ತುರ್ತು ಪರಿಸ್ಥಿತಿ ವೇಳೆ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಎಲ್ಲ ಸಿದ್ಧತೆಗಳನ್ನೂ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಡಿಯ ಬಳಿ ಡ್ರೋನ್ ನಿಗ್ರಹ ವ್ಯವಸ್ಥೆಗಳನ್ನು ಸಹ ಸಕ್ರಿಯಗೊಳಿಸಲಾಗಿದೆ. ಜೈಸಲ್ಮೇರ್ ಮತ್ತು ಜೋಧಪುರದಲ್ಲಿ ಮಧ್ಯರಾತ್ರಿಯಿಂದ ಮುಂಜಾನೆ 4 ರವರೆಗೆ ವಿದ್ಯುತ್ ಕಡಿತಕ್ಕೆ ಆದೇಶ ಹೊರಡಿಸಲಾಗಿದೆ. ಈ ರೀತಿ ಬ್ಲ್ಯಾಕೌಟ್ ಮಾಡುವುದರಿಂದ ಸುಧಾರಿತ ಹೈಸ್ಪೀಡ್ ವಿಮಾನಗಳಿಗೆ ಅಡಚಣೆವುಂಟಾಗುತ್ತದೆ. ಇದರಿಂದಾಗಿ ಶತ್ರು ಪೈಲಟ್ ಗಳಿಗೆ ಭಾರತದ ಮೇಲೆ ದಾಳಿ ಮಾಡುವುದು ಕಷ್ಟವಾಗುತ್ತದೆ.
ಪಂಜಾಬ್‌ನಲ್ಲೂ ಎಲ್ಲಾ ಪೊಲೀಸ್ ಸಿಬ್ಬಂದಿಯ ರಜೆಗಳನ್ನು ರದ್ದುಗೊಳಿಸಿ, ರಜೆಯಲ್ಲಿ ಹೋದವರಿಗೆ ಕೆಲಸಕ್ಕೆ ಮರಳುವಂತೆ ಸೂಚಿಸಲಾಗಿದೆ. ಸಾರ್ವಜನಿಕ ಸಭೆಗಳನ್ನು ನಿರ್ಬಂಧಿಸಲಾಗಿದೆ. ಗಡಿಯಲ್ಲಿ ಉದ್ವಿಗ್ನತೆಯಿಂದಾಗಿ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರು ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.
ಮಂಗಳವಾರ ತಡರಾತ್ರಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಂಬತ್ತು ಸ್ಥಳಗಳ ಮೇಲೆ ಭಾರತವು ಆಪರೇಷನ್ ಸಿಂದೂರ ಹೆಸರಿನಲ್ಲಿ 24 ಕ್ಷಿಪಣಿಗಳ ದಾಳಿ ನಡೆಸಿ, ಭಯೋತ್ಪಾದಕರ ನೆಲೆಗಳನ್ನು ನಿರ್ನಾಮ ಮಾಡಿತ್ತು. ಈ ಮೂಲಕ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಲಾಗಿತ್ತು.



















