ಜೈಪುರ: ವಿವಾಹದ ವಯಸ್ಸು ತಲುಪದಿದ್ದರೂ, ಪರಸ್ಪರ ಒಪ್ಪಿಗೆಯ ಮೇರೆಗೆ ಇಬ್ಬರು ವಯಸ್ಕರು ‘ಲಿವ್-ಇನ್’ (ಸಹಬಾಳ್ವೆ) ಸಂಬಂಧದಲ್ಲಿ ಇರಲು ಕಾನೂನಿನಲ್ಲಿ ಅವಕಾಶವಿದೆ ಎಂದು ರಾಜಸ್ಥಾನ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಕೋಟಾ ಮೂಲದ 18 ವರ್ಷದ ಯುವತಿ ಮತ್ತು 19 ವರ್ಷದ ಯುವಕ ತಮಗೆ ರಕ್ಷಣೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನೂಪ್ ಧಂಡ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ. ಯುವಜೋಡಿ ಪರಸ್ಪರ ಒಪ್ಪಿಗೆಯಿಂದ ಸಹಬಾಳ್ವೆ ನಡೆಸುತ್ತಿದ್ದು, ಕುಟುಂಬಸ್ಥರಿಂದ ಬೆದರಿಕೆ ಎದುರಿಸುತ್ತಿರುವುದಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ರಕ್ಷಣೆ ಕೋರಿದರೂ ಸ್ಪಂದನೆ ಸಿಗದ ಕಾರಣ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಭಾರತದಲ್ಲಿ ವಿವಾಹವಾಗಲು ಮಹಿಳೆಯರಿಗೆ 18 ವರ್ಷ ಮತ್ತು ಪುರುಷರಿಗೆ 21 ವರ್ಷ ವಯಸ್ಸಾಗಿರಬೇಕು. ಆದರೆ, 18 ವರ್ಷ ತುಂಬಿದ ಇಬ್ಬರೂ ಕಾನೂನಿನ ದೃಷ್ಟಿಯಲ್ಲಿ ವಯಸ್ಕರಾಗಿದ್ದು, ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರರು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸಂವಿಧಾನದ 21ನೇ ವಿಧಿಯು ಪ್ರತಿಯೊಬ್ಬರಿಗೂ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಆದ್ದರಿಂದ, ಮದುವೆಯ ವಯಸ್ಸಾಗಿಲ್ಲ ಎಂಬ ಕಾರಣಕ್ಕೆ ವಯಸ್ಕರ ಸಹಬಾಳ್ವೆಯನ್ನು ತಡೆಯುವುದು ಅಥವಾ ಅವರಿಗೆ ರಕ್ಷಣೆ ನಿರಾಕರಿಸುವುದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.
ಸರ್ಕಾರದ ಪರ ವಕೀಲರು, ಯುವಕನಿಗೆ ಇನ್ನೂ ಮದುವೆಯ ವಯಸ್ಸು (21 ವರ್ಷ) ಆಗದಿರುವುದರಿಂದ ಈ ಸಂಬಂಧಕ್ಕೆ ಅನುಮತಿ ನೀಡಬಾರದು ಎಂದು ವಾದಿಸಿದರು. ಆದರೆ, ಇದನ್ನು ತಳ್ಳಿಹಾಕಿದ ನ್ಯಾಯಾಲಯ, ಸಹಬಾಳ್ವೆ ನಡೆಸುವುದು ಅಪರಾಧವಲ್ಲ ಎಂದು ಹೇಳಿದೆ. ಅಲ್ಲದೆ, ಜೋಡಿಗೆ ಬೆದರಿಕೆ ಇರುವುದು ದೃಢಪಟ್ಟರೆ ತಕ್ಷಣವೇ ರಕ್ಷಣೆ ನೀಡುವಂತೆ ಭಿಲ್ವಾರ ಮತ್ತು ಜೋಧ್‌ಪುರ (ಗ್ರಾಮಾಂತರ) ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಇಂಡಿಗೋ ಅವ್ಯವಸ್ಥೆ : ಗೋವಾದಿಂದ ಮುಂಬೈಗೆ ಬರಲು 4.2 ಲಕ್ಷ ರೂ. ತೆತ್ತ ಗಾಯಕ ರಾಹುಲ್ ವೈದ್ಯ!



















