ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಹೀನಾಯ ಪ್ರದರ್ಶನ ಕಂಡಿದೆ. ಈಗ ಭಾರತದ ಎದುರು ಆಸ್ಟ್ರೇಲಿಯಾ ತಂಡದ ಸರಣಿ ಇದೆ. ಈ ಸರಣಿಯನ್ನು ಬಾರತ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಿಸುತ್ತಿದೆ. ಈ ಮಧ್ಯೆ ಫಾರ್ಮ್ ಕಂಡುಕೊಳ್ಳಲು ವಿಫಲವಾಗುತ್ತಿರುವ ರಾಹುಲ್ ಗೆ ಭಾರತ ಎ ತಂಡದಲ್ಲಿ ಆಡುವಂತೆ ಸೂಚಿಸಲಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಕೆಎಲ್ ರಾಹುಲ್ ಅವರಿಗೆ ಭಾರತ ಎ ತಂಡದ ಪರ ಕಣಕ್ಕಿಳಿಯುವಂತೆ ತಿಳಿಸಲಾಗಿದೆ ಎಂದು ವರದಿ ಹೇಳಿದೆ. ಭಾರತ ಎ ತಂಡವು ಆಸ್ಟ್ರೇಲಿಯಾ ಎ ವಿರುದ್ಧ ಮೆಲ್ಬೋರ್ನ್ನಲ್ಲಿ ಟೆಸ್ಟ್ ಸರಣಿ ಆಡುತ್ತಿದ್ದು, ಈ ಸರಣಿಯ ಎರಡನೇ ಪಂದ್ಯಕ್ಕೂ ಮುನ್ನ ಭಾರತ ಎ ತಂಡವನ್ನು ಕೂಡಿಕೊಳ್ಳುವಂತೆ ಕೆಎಲ್ ರಾಹುಲ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೇಲ್ ಗೆ ಬಿಸಿಸಿಐ ಹೇಳಿದೆ ಎನ್ನಲಾಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ಪರ್ತ್ ನಲ್ಲಿ ಆರಂಭವಾಗಿದೆ. ಈ ಸರಣಿಗೂ ಮುನ್ನ ಕೆಎಲ್ ರಾಹುಲ್ ಅವರಿಗೆ ಆಸ್ಟ್ರೇಲಿಯಾ ಎ ವಿರುದ್ಧ ಪಂದ್ಯವಾಡುವಂತೆ ತಿಳಿಸಲಾಗಿದೆ. ಕೆಎಲ್ ರಾಹುಲ್ ಮೊದಲ ಟೆಸ್ಟ್ ಪಂದ್ಯದಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಇನ್ನು ರಿಷಭ್ ಪಂತ್ ಮೊಣಕಾಲು ನೋವಿಗೆ ಒಳಗಾದಾಗ ಧ್ರುವ್ ಜುರೇಲ್ ವಿಕೆಟ್ ಕೀಪಿಂಗ್ ಮಾಡಿದ್ದರು. ಈಗ ಇಬ್ಬರನ್ನು ಭಾರತ ಎ ತಂಡಕ್ಕೆ ಸೇರ್ಪಡೆಗೊಳಿಸಲು ಬಿಸಿಸಿಐ ನಿರ್ಧರಿಸಿದೆ.
ಭಾರತ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳ ನಡುವಣ 4 ದಿನಗಳ ಟೆಸ್ಟ್ ಪಂದ್ಯವು ನವೆಂಬರ್ 7 ರಿಂದ ಶುರುವಾಗಲಿದೆ. ಭಾರತ ಎ ತಂಡದ ಪರ ಕಣಕ್ಕಿಳಿದು ಕೆಎಲ್ ರಾಹುಲ್ ವಿಫಲರಾದರೆ ಟೆಸ್ಟ್ ತಂಡದಿಂದ ಹೊರಗೆ ಬೀಳಬಹುದು ಎನ್ನಲಾಗುತ್ತಿದೆ.
ಭಾರತ ಎ ತಂಡದಲ್ಲಿ ರುತುರಾಜ್ ಗಾಯಕ್ವಾಡ್ (ನಾಯಕ), ಅಭಿಮನ್ಯು ಈಶ್ವರನ್ (ಉಪನಾಯಕ), ಸಾಯಿ ಸುದರ್ಶನ್, ನಿತೀಶ್ ಕುಮಾರ್ ರೆಡ್ಡಿ, ದೇವದತ್ ಪಡಿಕ್ಕಲ್, ರಿಕಿ ಭುಯಿ, ಬಾಬಾ ಇಂದರ್ಜೀತ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಮುಖೇಶ್ ಕುಮಾರ್, ಖಲೀಲ್ ಅಹ್ಮದ್ , ನವದೀಪ್ ಸೈನಿ, ಮಾನವ್ ಸುತಾರ್, ತನುಷ್ ಕೋಟ್ಯಾನ್, ಕೆಎಲ್ ರಾಹುಲ್ ಮತ್ತು ಧ್ರುವ್ ಜುರೇಲ್ ಸ್ಥಾನ ಪಡೆದಿದ್ದಾರೆ.