ನವದೆಹಲಿ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಮತಗಳ್ಳತನದ ಆರೋಪ ಹೊರಿಸಿ ಬಿಹಾರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ನಡೆಸುತ್ತಿರುವ ‘ಮತದಾರರ ಅಧಿಕಾರ ಯಾತ್ರೆ‘ ಮತ್ತಷ್ಟು ಕಳೆಗಟ್ಟಿದ್ದು, ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಪುರ್ನಿಯಾದಲ್ಲಿ ಬುಲೆಟ್ ಬೈಕ್ ಸವಾರಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಆದರೆ, ಈ ನಡೆಗೆ ತೇಜಸ್ವಿ ಯಾದವ್ ಅವರ ಸಹೋದರ ಹಾಗೂ ಆರ್‌ಜೆಡಿಯ ಉಚ್ಚಾಟಿತ ಶಾಸಕ ತೇಜ್ ಪ್ರತಾಪ್ ಯಾದವ್ ಮತ್ತು ಬಿಜೆಪಿ ನಾಯಕರಿಂದ ತೀವ್ರ ಟೀಕೆ ವ್ಯಕ್ತವಾಗಿದೆ.

ರಾಜ್ಯದ ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ವಿರುದ್ಧ ನಡೆಯುತ್ತಿರುವ 16 ದಿನಗಳ ಈ ಯಾತ್ರೆಯು ಅರಾರಿಯಾ ಜಿಲ್ಲೆಗೆ ಪ್ರವೇಶಿಸಿದಾಗ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಅವರು ಮೋಟಾರ್‌ಸೈಕಲ್‌ನಲ್ಲಿ ಸವಾರಿ ಮಾಡಿದ್ದಾರೆ. ಈ ಇಬ್ಬರು ನಾಯಕರನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಜನರು ಕಿಕ್ಕಿರಿದು ನೆರೆದಿದ್ದು, ತಮ್ಮ ನಾಯಕರನ್ನು ಕಣ್ತುಂಬಿಕೊಂಡರು.
ಆಗಸ್ಟ್ 17 ರಂದು ಸಸಾರಾಮ್‌ನಿಂದ ಆರಂಭವಾದ 1,300 ಕಿ.ಮೀ. ಉದ್ದದ ಈ ಯಾತ್ರೆಯು 16 ದಿನಗಳಲ್ಲಿ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಂಚರಿಸಿ, ಸೆಪ್ಟೆಂಬರ್ 1 ರಂದು ಪಾಟ್ನಾದಲ್ಲಿ ಬೃಹತ್ ರ‍್ಯಾಲಿಯೊಂದಿಗೆ ಸಮಾರೋಪಗೊಳ್ಳಲಿದೆ.
ತೇಜ್ ಪ್ರತಾಪ್ ಯಾದವ್ ಟೀಕೆ
ತಮ್ಮದೇ ಸಹೋದರ ತೇಜಸ್ವಿ ಯಾದವ್ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ತೇಜ್ ಪ್ರತಾಪ್ ಯಾದವ್, ಸಾಮಾನ್ಯ ಜನರೊಂದಿಗೆ ಅವರಿಗಿರುವ ಸಂಪರ್ಕವನ್ನು ಪ್ರಶ್ನಿಸಿದ್ದಾರೆ. “ಚುನಾವಣೆ ಸಮಯದಲ್ಲಿ ಎಲ್ಲರೂ ತಮ್ಮ ಬೇಳೆ ಬೇಯಿಸಿಕೊಳ್ಳುವುದರಲ್ಲಿ ಬ್ಯುಸಿಯಾಗಿರುತ್ತಾರೆ. ತೇಜಸ್ವಿ ಮತ್ತು ರಾಹುಲ್ ಯಾತ್ರೆ ನಡೆಸುತ್ತಿದ್ದಾರೆ, ಆದರೆ ನಾವು ಹಳ್ಳಿಗಳ ಸಣ್ಣ ದಾರಿಗಳಲ್ಲಿ ನಡೆಯಲು ಬಯಸುತ್ತೇವೆ. ನಾವು ತಳಮಟ್ಟದ ನಾಯಕರಾಗಲು ಇಚ್ಛಿಸುತ್ತೇವೆ. ನಿಜವಾದ ಎರಡನೇ ಲಾಲು ಯಾರೆಂದು ಬಿಹಾರದ ಜನರಿಗೆ ಈಗಾಗಲೇ ತಿಳಿದಿದೆ. ನಾವು ಹೆಲಿಕಾಪ್ಟರ್‌ಗಳಲ್ಲಿ ಹಾರಾಡುವುದಿಲ್ಲ. ಈ ನಾಯಕರು ಹವಾನಿಯಂತ್ರಿತ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಜನರೊಂದಿಗೆ ಕೈಕುಲುಕುತ್ತಲೂ ಇಲ್ಲ. ತಮ್ಮನ್ನು ಜನರ ನಾಯಕರೆಂದು ಕರೆದುಕೊಳ್ಳುತ್ತಾರೆ, ಆದರೆ ಸಾಮಾನ್ಯ ಜನರಿಂದ ದೂರ ಉಳಿದಿದ್ದಾರೆ,” ಎಂದು ತೇಜ್ ಪ್ರತಾಪ್ ಕಿಡಿಕಾರಿದ್ದಾರೆ.
ಬಿಜೆಪಿಯಿಂದಲೂ ತೀವ್ರ ವಾಗ್ದಾಳಿ
ಬಿಹಾರದ ಉಪಮುಖ್ಯಮಂತ್ರಿ ವಿಜಯ್ ಸಿನ್ಹಾ, “ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತಿದ್ದರೆ, ಇನ್ನೊಂದೆಡೆ ಬಂಗಾರದ ಚಮಚದೊಂದಿಗೆ ಹುಟ್ಟಿದ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಪ್ರಧಾನಿ ಮೋದಿಯವರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸುತ್ತಾ ಊರು ಸುತ್ತುತ್ತಿದ್ದಾರೆ,” ಎಂದು ಆರೋಪಿಸಿದ್ದಾರೆ. ಬಿಹಾರದ ಮತ್ತೊಬ್ಬ ಉಪಮುಖ್ಯಮಂತ್ರಿಯಾಗಿರುವ ಸಾಮ್ರಾಟ್ ಚೌಧರಿ ಕೂಡ ವಂಶ ರಾಜಕಾರಣವನ್ನು ಅಣಕವಾಡಿದ್ದಾರೆ. “ಈ ದಿನಗಳಲ್ಲಿ ಕೆಲವು ರಾಜಕುಮಾರರು ರಾಜ್ಯದಲ್ಲಿ ಓಡಾಡುತ್ತಿದ್ದಾರೆ. ಒಬ್ಬರ ತಂದೆ 15 ವರ್ಷ ಮುಖ್ಯಮಂತ್ರಿಯಾಗಿದ್ದರು, ಇನ್ನೊಬ್ಬರ ತಾಯಿ ಕೂಡ ಮುಖ್ಯಮಂತ್ರಿಯಾಗಿದ್ದರು,” ಎಂದು ಅವರು ವ್ಯಂಗ್ಯವಾಡಿದ್ದಾರೆ.



















