ಭಾರತದಲ್ಲಿ ಚುನಾವಣೆ ಸಂದರ್ಭದಲ್ಲಿ ಜಾತಿ ಗಣತಿ ಬಗ್ಗೆ ಮಾತನಾಡಿ ವಿಪಕ್ಷಗಳ ಆಕ್ರೋಶಕ್ಕೆ ಕಾರಣರಾಗಿದ್ದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಈಗ ಅಮೆರಿಕದಲ್ಲಿ ಈ ಕುರಿತು ಮಾತನಾಡಿದ್ದಾರೆ. ಅಲ್ಲದೇ, ಇದೇ ವೇಳೆ ಮೀಸಲಾತಿಯ ಬಗ್ಗೆಯೂ ಮಾತನಾಡಿದ್ದಾರೆ.
ಅಮೆರಿಕದ ವಾಷಿಂಗ್ಟನ್ ಡಿಸಿ ನಗರದ ಜಾರ್ಜ್ ಟೌನ್ ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಜೊತೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಮೀಸಲಾತಿ ತೆಗೆಯುವ ಕುರಿತು ಚಿಂತನೆ ನಡೆಸಬಹುದು. ಅದಕ್ಕೂ ಮುನ್ನ ಭಾರತ ದೇಶವು ನ್ಯಾಯಯುತ ಸ್ಥಳವಾಗಿ ಮಾರ್ಪಡಬೇಕು.
ಭಾರತದಲ್ಲಿ ಒಬಿಸಿ, ದಲಿತ ಹಾಗೂ ಆದಿವಾಸಿಗಳು ಶೇ. 90ರಷ್ಟಿದ್ದಾರೆ. ಹೀಗಾಗಿ ಜಾತಿ ಗಣತಿಯಂತಹ ಸರಳಪ್ರಯತ್ನ ಮಾಡಲೇಬೇಕು. ಕೆಳ ಜಾತಿಯ, ಹಿಂದುಳಿದ ಜಾತಿಯ ಹಾಗೂ ದಲಿತ ಸಮುದಾಯದ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕಿದೆ ಎಂದಿದ್ದಾರೆ.
ಅಲ್ಲದೇ, ಭಾರತದ ಪ್ರಮುಖ 200 ಉದ್ಯಮ ಸಂಸ್ಥೆಗಳಲ್ಲಿ ಭಾರತದ ಶೇ. 90ರಷ್ಟು ಜನಸಂಖ್ಯೆ ಹೊಂದಿರುವ ಸಮುದಾಯಗಳ ಯಾರೊಬ್ಬರೂ ಮಾಲೀಕರಾಗಿಲ್ಲ. ಮಾಧ್ಯಮಗಳಲ್ಲಿ ಕೆಳ ವರ್ಗ, ಒಬಿಸಿ ಹಾಗೂ ದಲಿತ ಸಮುದಾಯದ ಭಾಗೀದಾರಿಕೆ ಶೂನ್ಯ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಹೀಗಾಗಿ ದಲಿತರು, ಒಬಿಸಿ ಹಾಗೂ ಕೆಳ ವರ್ಗದ ಜನರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.ಸಾಂಸ್ಥಿಕ ಸಮೀಕ್ಷೆ, ಸಾಮಾಜಿಕ – ಆರ್ಥಿಕ ಸಮೀಕ್ಷೆ ಹಾಗೂ ಜನ ಗಣತಿಯ ಆಧಾರದ ಮೇಲೆ ಜಾತಿ ಗಣತಿ ನಡೆಯಬೇಕು. ಈ ಸಮುದಾಯದಲ್ಲಿನ ಆರ್ಥಿಕ ಸ್ಥಿತಿಗತಿ, ಬಡತನ ಪ್ರಮಾಣ ಸೇರಿದಂತೆ ಹಲವು ವಿಚಾರಗಳ ಅಧ್ಯಯನ ನಡೆಯಬೇಕಿದೆ.
ಈ ದೇಶದ ಹಲವು ವಲಯಗಳಾದ ಮಾಧ್ಯಮ, ಆರೋಗ್ಯ ಸೇವೆ ಹಾಗೂ ಶಿಕ್ಷಣ ಸೇರಿದಂತೆ ಹಲವು ವಲಯಗಳಲ್ಲಿ ಈ ತಳ ಸಮುದಾಯಗಳ ಭಾಗೀದಾರಿಕೆ ಕುರಿತಾಗಿಯೂ ನಾವು ಪರಿಶೀಲನೆ ನಡೆಸಬೇಕಿದೆ ಎಂದಿದ್ದಾರೆ.