ನವದೆಹಲಿ: ಕೇಂದ್ರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಡಿಜೆಐ ಡ್ರೋನ್ ತೋರಿಸಿ ಅದನ್ನು ಹಾರಿಸಿರುವ ವೀಡಿಯೋ ಹಂಚಿಕೊಂಡಿದ್ದರು. ಸದ್ಯ ಅದು ವಿವಾದಕ್ಕೆ ಕಾರಣವಾಗಿದೆ.
ಮೋದಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ರಾಹುಲ್ ಗಾಂಧಿ ನಿಷೇಧಿತ ಚೀನಾ ಡ್ರೋನ್ ಪ್ರದರ್ಶಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಉಕ್ರೇನ್ ಯುದ್ಧದಲ್ಲಿ ಡ್ರೋನ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಆದರೆ ನರೇಂದ್ರ ಮೋದಿ ಸರ್ಕಾರವು ಡ್ರೋನ್ ಬಳಕೆಯ ಮೂಲಕ ಅದರ ಲಾಭ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ವ್ಯಂಗ್ಯವಾಡಿದ್ದರು. ಡ್ರೋನ್ ಉದ್ಯಮವು ಒದಗಿಸಿದ್ದ ಅವಕಾಶವನ್ನು ಪ್ರಧಾನಿ ಮೋದಿ ಗ್ರಹಿಸಲು ವಿಫಲರಾಗಿದ್ದಾರೆ. ಭಾರತಕ್ಕೆ ಬಲವಾದ ಉತ್ಪಾದನಾ ವ್ಯವಸ್ಥೆ ಬೇಕು. ಖಾಲಿ ಪದಗಳಲ್ಲ ಎಂದು ಹೇಳಿಕೆ ನೀಡಿದ್ದರು.
ಈಗ ಡ್ರೋನ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಸ್ಮಿತ್ ಶಾ ಅವರು, “ದೇಶಧಲ್ಲಿ ಡ್ರೋನ್ ಗಳನ್ನು ತಯಾರಿಸುವ 400ಕ್ಕೂ ಅಧಿಕ ಕಂಪನಿಗಳಿವೆ. ರಾಹುಲ್ ಗಾಂಧಿ ಪ್ರದರ್ಶಿಸಿರುವ ಡ್ರೋನ್ ನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ನಿಷೇಧಿತ ಚೀನೀ DJI ಡ್ರೋನ್ ನ್ನು ಹೆಮ್ಮೆಯಿಂದ ಪ್ರದರ್ಶಿಸಿರುವ ಮೂಲಕ ರಾಹುಲ್ ಗಾಂಧಿ ಭಾರತದ ಡ್ರೋನ್ ಉದ್ಯಮವನ್ನು ಅವಮಾನಿಸಿದ್ದಾರೆ. ಚೀನಾದ ಈ ಡ್ರೋನ್ ರಾಹುಲ್ ಗಾಂಧಿಯ ಕೈ ಹೇಗೆ ಸೇರಿದೆ? ಕಳ್ಳಸಾಗಣೆ ಮೂಲಕ ತರಲಾಯಿತೇ? ಎಂದು ಪ್ರಶ್ನಿಸಿದ್ದಾರೆ.