ಬೆಂಗಳೂರು: ಜನವರಿ 30 ರಿಂದ ನಡೆಯಲಿರುವ ರಣಜಿ ಟ್ರೋಫಿ ಅಂತಿಮ ಲೀಗ್ ಪಂದ್ಯದಲ್ಲಿ ಹರಿಯಾಣ ತಂಡವನ್ನು ಕರ್ನಾಟಕ ತಂಡ ಎದುರಿಸಲಿದೆ. ಈ ಹಣಾಹಣಿಯಲ್ಲಿ ಕರ್ನಾಟಕ ಪರ ಆಡಲು ಕೆ.ಎಲ್.ರಾಹುಲ್ ಸಜ್ಜಾಗಿದ್ದಾರೆ. ಹರಿಯಾಣ ತಂಡ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದು ನಾಕೌಟ್ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿದೆ. ಹೀಗಾಗಿ ಕರ್ನಾಟಕ ತಂಡಕ್ಕೆ ಹೆಚ್ಚಿನ ಸವಾಲು ಎದುರಾಗಿದೆ. ಇಂಥ ಪರಿಸ್ಥಿತಿಯಲ್ಲಿ ಕೆ. ಎಲ್ ರಾಹುಲ್ ನೆರವಿಗೆ ಬರುವ ನಿರೀಕ್ಷೆಯಿದೆ.
ಆಸ್ಟ್ರೇಲಿಯಾ ಪ್ರವಾಸದ ವೇಳೆ ಎಲ್ಲಾ ಐದು ಟೆಸ್ಟ್ ಪಂದ್ಯಗಳನ್ನಾಡಿದ್ದ ರಾಹುಲ್ ಸಾಮಾನ್ಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆದರೆ ಕೊನೇ ಹಂತದಲ್ಲಿ ಮೊಣಕೈ ನೋವಿಗೆ ಒಳಗಾಗಿದ್ದರು. ಪುನಶ್ಚೇತನ ಶಿಬಿರದಲ್ಲಿರುವ ಅವರು ಸುಧಾರಿಸಿಕೊಂಡಿದ್ದಾರೆ. ಹೀಗಾಗಿ ಕರ್ನಾಟಕ ಪರ ಕಣಕ್ಕೆ ಇಳಿಯಲು ಮುಂದಾಗಿದ್ದಾರೆ. ರಾಹುಲ್ 2020ರಲ್ಲಿ ಬಂಗಾಳ ವಿರುದ್ಧ ಕೊನೆಯ ಬಾರಿ ರಣಜಿ ಪಂದ್ಯ ಆಡಿದ್ದರು.
ಭಾರತ ತಂಡದ ಆಟಗಾರರಾದ ರಿಷಭ್ ಪಂತ್, ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ರವೀಂದ್ರ ಜಡೇಜ ಈ ಹಿಂದಿನ ಸುತ್ತಿನ ಪಂದ್ಯಗಳಲ್ಲಿ ಆಡಿದ್ದರು. ಇದೀಗ ರಾಹುಲ್ ಕೂಡ ಆಡುವ ಮೂಲಕ ಬಿಸಿಸಿಐ ನಿಯಮ ಪಾಲಿಸಲು ಮುಂದಾಗಿದೆ. ಭಾರತ ತಂಡದ ಆಟಗಾರರು ಸಮಯ ಸಿಕ್ಕಾಗ ರಣಜಿ ಆಡಲೇಬೇಕು ಎಂದು ಹೇಳಿದೆ. ಇಲ್ಲದಿದ್ದರೆ ಕೇಂದ್ರ ಗುತ್ತಿಗೆ ಸಿಗುವುದಿಲ್ಲ ಎಂದು ಎಚ್ಚರಿಸಿತ್ತು. ಹೀಗಾಗಿ ಎಲ್ಲರೂ ಆಡಲು ಮುಂದಾಗಿದ್ದಾರೆ.
ರಾಹುಲ್ ಮಂಗಳವಾರದಿಂದ ಅಭ್ಯಾಸದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಗಾಯದ ಸಮಸ್ಯೆಯಿಂದಾಗಿ ಬಹುತೇಕ ಪಂದ್ಯಗಳನ್ನು ಕಳೆದುಕೊಂಡಿದ್ದ ವೇಗದ ಬೌಲರ್ ವಿದ್ವತ್ ಕಾವೇರಪ್ಪ ತಂಡಕ್ಕೆ ಮರಳಿದ್ದು, ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ಸಿಗಲಿದೆ.
ಸಿ ಗುಂಪಿನಲ್ಲಿ ಹರ್ಯಾಣ (26), ಕೇರಳ (21) ಮೊದಲೆರಡು ಸ್ಥಾನ ಪಡೆದಿದ್ದು, ಕರ್ನಾಟಕ ತಂಡ (19) ಮೂರನೇ ಸ್ಥಾನದಲ್ಲಿದೆ.
ತಂಡ ಹೀಗಿದೆ: ಮಯಂಕ್ ಅಗರ್ವಾಲ್ (ನಾಯಕ), ಕೆ.ಎಲ್.ರಾಹುಲ್, ಶ್ರೇಯಸ್ ಗೋಪಾಲ್ (ಉಪನಾಯಕ), ದೇವದತ್ತ ಪಡಿಕ್ಕಲ್, ಕೆ.ವಿ.ಅನೀಶ್, ಆರ್.ಸ್ಮರಣ್, ಕೆ.ಎಲ್.ಶ್ರೀಜಿತ್ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಹಾರ್ದಿಕ್ ರಾಜ್, ಪ್ರಸಿದ್ಧ ಕೃಷ್ಣ, ವಿದ್ವತ್ ಕಾವೇರಪ್ಪ, ವಾಸುಕಿ ಕೌಶಿಕ್, ಅಭಿಲಾಷ್ ಶೆಟ್ಟಿ, ಯಶೋವರ್ಧನ್ ಪರಂತಾಪ್, ನಿಕಿನ್ ಜೋಸ್, ಸುಜಯ್ ಸತೇರಿ (ವಿಕೆಟ್ ಕೀಪರ್) ಮತ್ತು ಮೊಹಸಿನ್ ಖಾನ್.