ನವದೆಹಲಿ : ಆಮ್ ಆದ್ಮಿ ಪಾರ್ಟಿಯ (AAP) ಆಂತರಿಕ ಕಲಹ ಜಗಜ್ಜಾಹೀರಾಗಿದ್ದು, ಪಕ್ಷದ ಪ್ರಭಾವಿ ನಾಯಕ ಹಾಗೂ ಸಂಸದ ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯ ಉಪನಾಯಕನ ಸ್ಥಾನದಿಂದ ದಿಢೀರ್ ಪದಚ್ಯುತಗೊಳಿಸಲಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ಚಡ್ಡಾ, “ನನ್ನನ್ನು ಮೌನಗೊಳಿಸಬಹುದು, ಆದರೆ ಸೋಲಿಸಲು ಸಾಧ್ಯವಿಲ್ಲ” ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.
ರಾಜ್ಯಸಭೆಯಲ್ಲಿ ಪಕ್ಷದ ಪರವಾಗಿ ಮಾತನಾಡಲು ಚಡ್ಡಾ ಅವರಿಗೆ ಹೆಚ್ಚಿನ ಸಮಯಾವಕಾಶ ಸಿಗದಂತೆ ಮಾಡಲು ಪಕ್ಷದ ಹೈಕಮಾಂಡ್ ಸಚಿವಾಲಯಕ್ಕೆ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಎಕ್ಸ್ (X) ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, “ಸಂಸತ್ತಿನಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ಎತ್ತುವುದು ಅಪರಾಧವೇ? ನಾನು ಯಾವ ತಪ್ಪು ಮಾಡಿದ್ದೇನೆ? ಹಸಿವು, ನಿರುದ್ಯೋಗ ಮತ್ತು ಬೆಲೆ ಏರಿಕೆಯ ಬಗ್ಗೆ ಧ್ವನಿ ಎತ್ತಿದ್ದಕ್ಕೆ ನನ್ನನ್ನು ಮಾತನಾಡದಂತೆ ತಡೆಯಲಾಗುತ್ತಿದೆ” ಎಂದು ಆರೋಪಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಈ ನಿರ್ಧಾರವು ರಾಜಕೀಯ ವಲಯದಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕೇಜ್ರಿವಾಲ್ ಆಪ್ತ ವಲಯದಿಂದ ದೂರವಾದರೇ ಚಡ್ಡಾ?
ಒಂದು ಕಾಲದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಅತ್ಯಂತ ನಿಕಟವರ್ತಿಯಾಗಿದ್ದ ರಾಘವ್ ಚಡ್ಡಾ, ಇತ್ತೀಚಿನ ದಿನಗಳಲ್ಲಿ ಪಕ್ಷದ ಪ್ರಮುಖ ಚಟುವಟಿಕೆಗಳಿಂದ ದೂರ ಉಳಿದಿದ್ದರು. ವಿಶೇಷವಾಗಿ ದೆಹಲಿ ಮದ್ಯ ನೀತಿ ಹಗರಣದಲ್ಲಿ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರಿಗೆ ಕ್ಲೀನ್ ಚಿಟ್ ಸಿಕ್ಕ ಸಂದರ್ಭದಲ್ಲಿ ಚಡ್ಡಾ ಅವರ ಮೌನ ಪಕ್ಷದೊಳಗೆ ಅಸಮಾಧಾನ ಮೂಡಿಸಿತ್ತು ಎನ್ನಲಾಗಿದೆ. 2012ರಿಂದ ಪಕ್ಷದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಡ್ಡಾ ಅವರ ಸ್ಥಾನಕ್ಕೆ ಈಗ ಪಂಜಾಬ್‌ನ ಮತ್ತೊಬ್ಬ ಸಂಸದ ಅಶೋಕ್ ಮಿತ್ತಲ್ ಅವರನ್ನು ನೇಮಿಸಲಾಗಿದೆ.
‘ಆಮ್ ಆದ್ಮಿ’ಗಾಗಿ ಹೋರಾಟ ಮುಂದುವರಿಕೆ
ಪದಚ್ಯುತಿಯ ನಂತರವೂ ರಾಘವ್ ಚಡ್ಡಾ ಅವರು ಸಂಸತ್ತಿನಲ್ಲಿ ತಾವು ಜನಸಾಮಾನ್ಯರ ಪರವಾಗಿ ಮಾಡಿದ ಭಾಷಣಗಳ ತುಣುಕುಗಳನ್ನು ಹಂಚಿಕೊಂಡಿದ್ದಾರೆ. ವಿಮಾನ ನಿಲ್ದಾಣಗಳಲ್ಲಿನ ದುಬಾರಿ ಆಹಾರ, ಗಿಗ್ ಕಾರ್ಮಿಕರ ಹಕ್ಕುಗಳು ಮತ್ತು ಸಂಚಾರ ದಟ್ಟಣೆಯಂತಹ ಜನರ ದಿನನಿತ್ಯದ ಸಮಸ್ಯೆಗಳ ಬಗ್ಗೆ ತಾವು ಧ್ವನಿ ಎತ್ತಿದ್ದನ್ನು ಅವರು ನೆನಪಿಸಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಅವರು ಹಂಚಿಕೊಂಡ ಹೊಸ ವಿಡಿಯೋಗಳಲ್ಲಿ ಎಲ್ಲಿಯೂ ಆಮ್ ಆದ್ಮಿ ಪಾರ್ಟಿ ಅಥವಾ ಕೇಜ್ರಿವಾಲ್ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ. ಬದಲಿಗೆ ಕೆಟ್ಟ ದೃಷ್ಟಿ ಬೀಳದಿರಲಿ ಎಂಬ ಅರ್ಥದ ‘ನಜರ್’ ಎಮೋಜಿಯನ್ನು ಬಳಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ : ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್ಟೇಬಲ್ ಕಾರು.. ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ!



















