ಬೆಂಗಳೂರು : ಭಾರತೀಯ ಕ್ರಿಕೆಟ್‌ನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಫ್ಯಾನ್ ಆರ್ಮಿಗಳ (ಅಭಿಮಾನಿಗಳ ಪಡೆ) ಪ್ರಭಾವ ಹಾಗೂ ‘ಸೂಪರ್‌ಹೀರೋ’ ಸಂಸ್ಕೃತಿಯ ವಿರುದ್ಧ ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಆರ್. ಅಶ್ವಿನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಸ್ತುತ ದಿನಗಳಲ್ಲಿ ಕ್ರಿಕೆಟ್ ಆಟಕ್ಕಿಂತ ಹೆಚ್ಚಾಗಿ ಪಿಆರ್ (ಸಾರ್ವಜನಿಕ ಸಂಪರ್ಕ) ಆಧಾರಿತ ಕಥನಗಳು, ಬ್ರ್ಯಾಂಡ್ ಬಿಲ್ಡಿಂಗ್ ಹಾಗೂ ವ್ಯಕ್ತಿ ಕೇಂದ್ರಿತ ಚರ್ಚೆಗಳೇ ವಿಜೃಂಭಿಸುತ್ತಿದ್ದು, ಇದು ಆಟದ ನೈಜ ಸೌಂದರ್ಯವನ್ನು ಮರೆಮಾಚುತ್ತಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ ಆರ್ಮಿಗಳ ಮೂಲಕ ಹರಿದಾಡುತ್ತಿರುವ ಅನೇಕ ಅಭಿಪ್ರಾಯಗಳು, ವಾಸ್ತವದಲ್ಲಿ ತಾವು ಕ್ರಿಕೆಟ್ ವಲಯದ ಆಂತರಿಕ ಚರ್ಚೆಗಳಲ್ಲಿ ಖುದ್ದಾಗಿ ಕೇಳಿಸಿಕೊಂಡಂತಹ ಮಾತುಗಳೇ ಆಗಿವೆ ಎಂಬ ಆಘಾತಕಾರಿ ವಿಚಾರವನ್ನು ಅಶ್ವಿನ್ ಬಿಚ್ಚಿಟ್ಟಿದ್ದಾರೆ. ಈ ರೀತಿಯ ನಿರೂಪಣೆಗಳನ್ನು ಹೇಗೆ ವ್ಯವಸ್ಥಿತವಾಗಿ ವೈರಲ್ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಅವರು ಪ್ರಶ್ನೆಗಳನ್ನೆತ್ತಿದ್ದಾರೆ. ಇತ್ತೀಚೆಗಷ್ಟೇ ಅಂದರೆ 2024ರ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಅಶ್ವಿನ್, ಕೋಲ್ಕತ್ತಾದಲ್ಲಿ ನಡೆದ ರೆವ್‌ಸ್ಪೋರ್ಟ್ಸ್ ಕಾನ್‌ಕ್ಲೇವ್‌ನಲ್ಲಿ ಪಾಲ್ಗೊಂಡು ಈ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ.
ಫ್ಯಾನ್ಸ್ ಆರ್ಮಿಯೆಂಬ ಕಾಯಿಲೆ
ಪ್ರಸ್ತುತ ಭಾರತೀಯ ಕ್ರಿಕೆಟ್‌ನಲ್ಲಿ ಇದೊಂದು ರೀತಿಯ ಕಾಯಿಲೆಯಾಗಿ ಹರಡುತ್ತಿದೆ ಎಂದು ಅಶ್ವಿನ್ ಕಟುವಾಗಿ ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ ಆರ್ಮಿಗಳ ಹೆಸರಿನಲ್ಲಿ ಹರಿದಾಡುವ ಅನೇಕ ಅಭಿಪ್ರಾಯಗಳನ್ನು ತಾವು ಮೊದಲೇ ಖುದ್ದಾಗಿ ಕೇಳಿಸಿಕೊಂಡಿರುವುದಾಗಿ ಅವರು ಹೇಳಿದ್ದಾರೆ. ಕೆಲವು ಬಾರಿ ಉಪಹಾರದ ಟೇಬಲ್‌ನಲ್ಲಿ ಅಥವಾ ಮಧ್ಯಾಹ್ನದ ಊಟದ ಸಮಯದಲ್ಲಿ ಯಾರೋ ಆಡಿದ ಮಾತುಗಳೇ, ಸ್ವಲ್ಪ ಸಮಯದ ನಂತರ ಬೇರಾವುದೋ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ಪ್ರತ್ಯಕ್ಷವಾಗುತ್ತವೆ. ಇದನ್ನೆಲ್ಲಾ ನೋಡಿದಾಗ, ಇದೆಲ್ಲಾ ಹೇಗೆ ನಡೆಯುತ್ತಿದೆ ಎಂಬ ಆಶ್ಚರ್ಯ ಮೂಡುತ್ತದೆ ಎಂದು ಅಶ್ವಿನ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಆಟಗಾರರೇ ಖುದ್ದಾಗಿ ಇಂತಹ ಅಭಿಪ್ರಾಯಗಳನ್ನು ಬಿತ್ತುತ್ತಿದ್ದಾರೆ ಎಂದು ನೇರವಾಗಿ ಆರೋಪಿಸದಿದ್ದರೂ, ಈ ಬೆಳವಣಿಗೆ ನಿಜಕ್ಕೂ ಆತಂಕಕಾರಿಯಾಗಿದೆ ಎಂದಿದ್ದಾರೆ.
ಇದರ ಹಿಂದೆ ಯಾವುದಾದರೂ ಗೂಢಚರ್ಯೆ ನಡೆಯುತ್ತಿದೆಯೇ? ಹಾಗೆಂದ ಮಾತ್ರಕ್ಕೆ ಅದೇ ಸತ್ಯ ಎಂದು ಹೇಳುತ್ತಿಲ್ಲ, ಆದರೆ ಇದರ ಹಿಂದೆ ಖಂಡಿತವಾಗಿಯೂ ಒಂದು ವ್ಯವಸ್ಥಿತ ವಾಣಿಜ್ಯ ರಚನೆ ಕೆಲಸ ಮಾಡುತ್ತಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇಂದು ಪ್ರತಿಯೊಬ್ಬ ಆಟಗಾರನೂ ಒಬ್ಬ ಉದ್ಯಮಿಯಾಗಿದ್ದಾನೆ. ತಮ್ಮ ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಅಥವಾ ಪಿಆರ್ ಸುಧಾರಿಸಿಕೊಳ್ಳಲು ಹೊರಗಡೆ ಇಂತಹ ಅಭಿಪ್ರಾಯಗಳನ್ನು ಹರಿಯಬಿಡಲಾಗುತ್ತಿದೆ. ತಮ್ಮ ಪ್ರಚಾರಕ್ಕೆ ಅಭ್ಯಂತರವಿಲ್ಲ, ಆದರೆ ಮತ್ತೊಬ್ಬ ಕ್ರಿಕೆಟಿಗನ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ಎಂದಿಗೂ ಒಪ್ಪುವುದಿಲ್ಲ ಎಂದು ಅವರು ಖಡಕ್ ಆಗಿ ನುಡಿದಿದ್ದಾರೆ.
ವ್ಯಕ್ತಿ ಕೇಂದ್ರಿತ ವ್ಯವಸ್ಥೆ
ಭಾರತೀಯ ಕ್ರಿಕೆಟ್ ಈಗ ಆಟದ ಬಗ್ಗೆ ಚರ್ಚಿಸುವುದಕ್ಕಿಂತ ಹೆಚ್ಚಾಗಿ ವ್ಯಕ್ತಿ-ಕೇಂದ್ರಿತ ಕಥೆಗಳ ಸುತ್ತಲೇ ಗಿರಕಿ ಹೊಡೆಯುತ್ತಿದೆ ಎಂದು ಅಶ್ವಿನ್ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಜನವರಿಯಲ್ಲಿ ಇಂದೋರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಅವರ ಔಟಾದ ರೀತಿಯ ಬಗ್ಗೆ ತಾವು ಮಾಡಿದ ವಿಶ್ಲೇಷಣೆಯನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ತಮ್ಮ ವಿಶ್ಲೇಷಣೆ ಯಾವಾಗಲೂ ‘ಏನು’ ಮತ್ತು ‘ಏಕೆ’ ಎಂಬುದರ ಬಗ್ಗೆ ಇರುತ್ತದೆಯೇ ಹೊರತು, ‘ಯಾರು’ ಎಂಬುದರ ಬಗ್ಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಅಲ್ಲಿನ ಚರ್ಚೆ ತಕ್ಷಣವೇ ಹೋಲಿಕೆಗಳು ಮತ್ತು ವೈಯಕ್ತಿಕ ಅಜೆಂಡಾಗಳತ್ತ ತಿರುಗಿತು. ಶುಭ್‌ಮನ್ ಬಗ್ಗೆ ಮಾತ್ರ ಏಕೆ ಮಾತನಾಡುತ್ತಿದ್ದೀರಿ, ಬೇರೆಯವರ ಬಗ್ಗೆ ಏಕೆ ಇಲ್ಲ? ಎಂದು ಜನ ಪ್ರಶ್ನಿಸಲು ಶುರುಮಾಡಿದರು. ಇವೆಲ್ಲವೂ ಎಲ್ಲಿಂದ ಶುರುವಾಯಿತು? ನಾವು ಆಟಗಾರರ ಸುತ್ತ ಕಥೆಗಳನ್ನು ಕಟ್ಟಲು ಪ್ರಾರಂಭಿಸಿದೆವು. ಸಿನಿಮೀಯ ರೀತಿಯ ಸೂಪರ್‌ಹೀರೋ ಸಂಸ್ಕೃತಿಯನ್ನು ಸೃಷ್ಟಿಸಿದೆವು.
ಈಗ ಕ್ರಿಕೆಟ್ ಬಗ್ಗೆ ಯಾರು ಮಾತನಾಡುತ್ತಾರೆ? ಆಟದ ಬಗ್ಗೆ ಯಾರೂ ಚರ್ಚಿಸುತ್ತಿಲ್ಲ. ನಾವು ಆಟವನ್ನು ಅದರ ಮೂಲ ಸತ್ವದಿಂದ ದೂರ ಸರಿಸಿ, ಕೇವಲ ‘ವ್ಯಕ್ತಿ’ಯ ಸುತ್ತ ಸೀಮಿತಗೊಳಿಸಿದ್ದೇವೆ ಎಂದು ಅಶ್ವಿನ್ ಕಳವಳ ವ್ಯಕ್ತಪಡಿಸಿದ್ದಾರೆ. ಅಶ್ವಿನ್ ಅವರ ಈ ಹೇಳಿಕೆಗಳು ಪ್ರಸ್ತುತ ಟೀಮ್ ಇಂಡಿಯಾದಲ್ಲಿ ನಡೆಯುತ್ತಿರುವ ಕೆಲವು ಮಹತ್ವದ ಬದಲಾವಣೆಗಳ ಸಂದರ್ಭದಲ್ಲೇ ಹೊರಬಿದ್ದಿರುವುದು ವಿಶೇಷ. 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ಸೋಲಿನ ನಂತರ, ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರು ತಂಡದಲ್ಲಿನ ‘ಸೂಪರ್‌ಸ್ಟಾರ್’ ಸಂಸ್ಕೃತಿಯನ್ನು ಬೇರುಸಹಿತ ಕಿತ್ತುಹಾಕಲು ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದರು. ಮಾಜಿ ನಾಯಕ ಸುನಿಲ್ ಗವಾಸ್ಕರ್ ಕೂಡ ತಂಡದಲ್ಲಿ ಬೆಳೆಯುತ್ತಿರುವ ಈ ಸ್ಟಾರ್ ಸಂಸ್ಕೃತಿಯನ್ನು ತೀವ್ರವಾಗಿ ಟೀಕಿಸಿದ್ದರು ಮತ್ತು ಇದನ್ನು ನಿಯಂತ್ರಿಸದಿದ್ದರೆ ಭಾರತೀಯ ಕ್ರಿಕೆಟ್‌ನ ಭವಿಷ್ಯಕ್ಕೆ ಕಂಟಕ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದ್ದರು. ಆಟಗಾರರು ಆಟದ ಬಗ್ಗೆ ಹೆಚ್ಚಿನ ಬದ್ಧತೆ ತೋರಬೇಕು ಮತ್ತು ತಂಡದಲ್ಲಿ ಶಿಸ್ತು ಹಾಗೂ ಹೊಣೆಗಾರಿಕೆಯನ್ನು ಮರುಸ್ಥಾಪಿಸಲು ಬಿಸಿಸಿಐ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗವಾಸ್ಕರ್ ಒತ್ತಾಯಿಸಿದ್ದರು.
ಇತ್ತೀಚೆಗಷ್ಟೇ ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರವೂ ಗೌತಮ್ ಗಂಭೀರ್ ಇದೇ ನಿಲುವನ್ನು ಪುನರುಚ್ಚರಿಸಿದ್ದರು. ಮುಖ್ಯ ತರಬೇತುದಾರನಾಗಿ ತಮ್ಮ ಮೊದಲ ಆದ್ಯತೆಯು ಬಲಿಷ್ಠ ತಂಡದ ಸಂಸ್ಕೃತಿಯನ್ನು ನಿರ್ಮಿಸುವುದೇ ಹೊರತು, ವೈಯಕ್ತಿಕ ಸ್ಟಾರ್‌ಗಳನ್ನು ಬೆಳೆಸುವುದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ಡ್ರೆಸ್ಸಿಂಗ್ ರೂಮ್‌ನಲ್ಲಿ ಪ್ರತಿಯೊಬ್ಬ ಆಟಗಾರನೂ ಸಮಾನ. ಅವರ ಜನಪ್ರಿಯತೆ, ಅಭಿಮಾನಿಗಳ ಸಂಖ್ಯೆ ಅಥವಾ ಸಾಮಾಜಿಕ ಮಾಧ್ಯಮದ ಪ್ರಭಾವದ ಆಧಾರದ ಮೇಲೆ ಅಲ್ಲದೆ, ತಂಡ ಮತ್ತು ದೇಶಕ್ಕೆ ಅವರು ನೀಡುವ ಕೊಡುಗೆಯ ಆಧಾರದ ಮೇಲೆ ಮಾತ್ರ ಅವರನ್ನು ನಿರ್ಣಯಿಸಲಾಗುತ್ತದೆ ಎಂದು ಗಂಭೀರ್ ಖಡಕ್ ಸಂದೇಶ ರವಾನಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಅಶ್ವಿನ್ ಆಡಿರುವ ಮಾತುಗಳು ಇದೀಗ ಕ್ರಿಕೆಟ್ ವಲಯದಲ್ಲಿ ಸ್ಟಾರ್ ಗಿರಿ ಹಾಗೂ ಅಭಿಮಾನಿಗಳ ಅಜೆಂಡಾಗಳ ಕುರಿತು ಹೊಸ ಸಂಚಲನ ಮೂಡಿಸಿವೆ.
ಇದನ್ನೂ ಓದಿ : 7 ಸಾವಿರ ಇನ್ಸೆಂಟಿವ್ ಹಣ ಕೊಟ್ಟಿಲ್ಲವೆಂದು ಕಂಪನಿಗೆ 7 ಲಕ್ಷ ನಷ್ಟ ಮಾಡಿದ ವ್ಯಕ್ತಿ!



















