ನವದೆಹಲಿ : ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದೆ. ಸೋಮವಾರ ನಡೆದ ಪಂದ್ಯದಲ್ಲಿ ತಾರಿಕ್ 27 ರನ್ ನೀಡಿ 3 ವಿಕೆಟ್ ಕಬಳಿಸಿ ತಂಡದ ಗೆಲುವಿಗೆ ಕಾರಣರಾದರು. ಆದರೆ, ಅವರ ಬೌಲಿಂಗ್ ಆಕ್ಷನ್ ಅಕ್ರಮವಾಗಿದೆ ಎಂಬ ಆರೋಪಗಳು ಕ್ರಿಕೆಟ್ ವಲಯದಲ್ಲಿ ಕೇಳಿಬಂದಿದ್ದು, ಈ ಸಂದರ್ಭದಲ್ಲಿ ಭಾರತದ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ಪಾಕ್ ಆಟಗಾರನ ಪರ ಬ್ಯಾಟ್ ಬೀಸಿದ್ದಾರೆ.
ಉಸ್ಮಾನ್ ತಾರಿಕ್ ಬೌಲಿಂಗ್ ಮಾಡುವಾಗ ಚೆಂಡು ಎಸೆಯುವ ಮುನ್ನ ರನ್-ಅಪ್‌ನಲ್ಲಿ ವಿರಾಮ (ಪಾಸ್) ತೆಗೆದುಕೊಳ್ಳುತ್ತಾರೆ ಮತ್ತು ಅವರ ಕೈ ಹೆಚ್ಚು ಬಾಗಿದಂತೆ ಕಾಣುತ್ತದೆ. ಇದನ್ನು ಪ್ರಶ್ನಿಸಿರುವ ಅಭಿಮಾನಿಗಳು ಮತ್ತು ಕೆಲ ಮಾಜಿ ಕ್ರಿಕೆಟಿಗರು, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂತಹ ಶೈಲಿಯನ್ನು ಹೇಗೆ ಅನುಮತಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಕೂಡ ತಾರಿಕ್ ಬೌಲಿಂಗ್ ಶೈಲಿಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಇದೀಗ ಮಾಜಿ ಕ್ರಿಕೆಟಿಗ ಶ್ರೀವತ್ಸ್ ಗೋಸ್ವಾಮಿ ಕೂಡ ತಾರಿಕ್ ಶೈಲಿಯನ್ನು ಟೀಕಿಸಿದ್ದು, “ಫುಟ್‌ಬಾಲ್ ಪೆನಾಲ್ಟಿಗಳಲ್ಲಿ ಆಟಗಾರರು ರನ್-ಅಪ್ ವೇಳೆ ನಿಲ್ಲಲು ಅನುಮತಿಸುವುದಿಲ್ಲ. ಕ್ರಿಕೆಟ್‌ನಲ್ಲಿ ಇದು ಹೇಗೆ ಸರಿಯಾಗುತ್ತದೆ? ಬೌಲಿಂಗ್ ಆಕ್ಷನ್ ಸರಿಯಿರಬಹುದು, ಆದರೆ ಎಸೆತಕ್ಕೂ ಮುನ್ನ ನಿಲ್ಲುವುದು ಸರಿಯಲ್ಲ,” ಎಂದು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಅಶ್ವಿನ್ ತಿರುಗೇಟು ಏನು?
ಶ್ರೀವತ್ಸ್ ಗೋಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ರವಿಚಂದ್ರನ್ ಅಶ್ವಿನ್, ಬ್ಯಾಟರ್ ಮತ್ತು ಬೌಲರ್‌ಗಳ ನಿಯಮಗಳಲ್ಲಿರುವ ತಾರತಮ್ಯವನ್ನು ಎತ್ತಿ ತೋರಿಸಿದ್ದಾರೆ. “ಫುಟ್‌ಬಾಲ್‌ನಲ್ಲಿ ಇದನ್ನು ಅನುಮತಿಸುವುದಿಲ್ಲ ಎಂಬುದು ನಿಜ. ಆದರೆ ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳು ಅಂಪೈರ್ ಅಥವಾ ಬೌಲರ್‌ಗೆ ಮುನ್ಸೂಚನೆ ನೀಡದೆಯೇ ‘ಸ್ವಿಚ್ ಹಿಟ್’ ಅಥವಾ ‘ರಿವರ್ಸ್ ಹಿಟ್’ ಹೊಡೆಯಲು ಅವಕಾಶವಿದೆ. ಬ್ಯಾಟರ್‌ಗಳಿಗೆ ಇಷ್ಟೆಲ್ಲಾ ಸ್ವಾತಂತ್ರ್ಯ ಇರುವಾಗ ಬೌಲರ್‌ಗಳಿಗೆ ಮಾತ್ರ ಏಕೆ ನಿರ್ಬಂಧಗಳು? ಬೌಲರ್ ತಾನು ಎಸೆಯುವ ಕೈಯನ್ನು (ಎಡ ಅಥವಾ ಬಲ) ಬದಲಾಯಿಸಬೇಕಾದರೆ ಅಂಪೈರ್‌ಗೆ ತಿಳಿಸಬೇಕು. ಮೊದಲು ಆ ನಿಯಮವನ್ನು ಬದಲಾಯಿಸಿ,” ಎಂದು ಅಶ್ವಿನ್ ಖಾರವಾಗಿ ಉತ್ತರಿಸಿದ್ದಾರೆ.
ಅಲ್ಲದೆ, ಬೌಲರ್ 15 ಡಿಗ್ರಿಗಿಂತ ಹೆಚ್ಚು ಕೈ ಬಾಗಿಸುತ್ತಿದ್ದಾರೆಯೇ ಎಂಬುದನ್ನು ಮೈದಾನದಲ್ಲಿರುವ ಅಂಪೈರ್‌ಗಳು ಬರಿಗಣ್ಣಿನಿಂದ ನಿರ್ಧರಿಸುವುದು ಅಸಾಧ್ಯ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. “ಇದಕ್ಕೆ ನೈಜ ಸಮಯದಲ್ಲಿ (Real-time) ಪರೀಕ್ಷಿಸುವ ತಂತ್ರಜ್ಞಾನದ ಅಗತ್ಯವಿದೆ. ತಾರಿಕ್ ರನ್-ಅಪ್‌ನಲ್ಲಿ ತೆಗೆದುಕೊಳ್ಳುವ ವಿರಾಮ ಅವರ ಸಹಜ ಶೈಲಿಯ ಭಾಗವಾಗಿದೆ. ಹೀಗಾಗಿ ಅದನ್ನು ಅಕ್ರಮ ಎಂದು ಹೇಳಲು ಸಾಧ್ಯವಿಲ್ಲ. ನಿಯಮಗಳ ಗೊಂದಲದ ಲಾಭ ಪಡೆಯುತ್ತಿದ್ದಾರೆ ಎಂದು ಆರೋಪಿಸುವುದು ತಪ್ಪು,” ಎಂದು ಅಶ್ವಿನ್ ಪಾಕ್ ಬೌಲರ್ ಬೆಂಬಲಕ್ಕೆ ನಿಂತಿದ್ದಾರೆ.
ಐಸಿಸಿ ನಿಯಮ ಏನು ಹೇಳುತ್ತದೆ?
ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್) ವೇಳೆ ಎರಡು ಬಾರಿ ದೂರು ನೀಡಲಾಗಿತ್ತು. ಆದರೆ ಎರಡೂ ಬಾರಿಯೂ ತಪಾಸಣೆಯ ನಂತರ ಅವರಿಗೆ ‘ಕ್ಲೀನ್ ಚಿಟ್’ ನೀಡಲಾಗಿದೆ. ಅಂತಾರಾಷ್ಟ್ರೀಯ ಅಂಪೈರ್ ಅನಿಲ್ ಚೌಧರಿ ಕೂಡ ತಾರಿಕ್ ಅವರ ಆಕ್ಷನ್ ಐಸಿಸಿ ನಿಯಮಗಳ ವ್ಯಾಪ್ತಿಯಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಮೊಣಕೈ ಸಮಸ್ಯೆಯ ಬಗ್ಗೆ ಈ ಹಿಂದೆ ಮಾತನಾಡಿದ್ದ ಉಸ್ಮಾನ್ ತಾರಿಕ್, “ನನ್ನ ಬೌಲಿಂಗ್ ಕೈಯಲ್ಲಿ ವೈದ್ಯಕೀಯ ಸಮಸ್ಯೆಯಿದೆ. ಮೊಣಕೈಯಲ್ಲಿರುವ ಎರಡು ಮೂಳೆಗಳ ಜೋಡಣೆಯಿಂದಾಗಿ ನನಗೆ ಕೈಯನ್ನು ಸಂಪೂರ್ಣವಾಗಿ ನೇರಗೊಳಿಸಲು ಸಾಧ್ಯವಾಗುವುದಿಲ್ಲ. ಇದು ಪ್ರೇಕ್ಷಕರಿಗೆ ಗೊಂದಲ ಉಂಟುಮಾಡುತ್ತದೆ ಅಷ್ಟೇ,” ಎಂದು ಸ್ಪಷ್ಟನೆ ನೀಡಿದ್ದರು. ಫೆಬ್ರವರಿ 15ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತದ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ತಾರಿಕ್ ಕಣಕ್ಕಿಳಿಯುವ ನಿರೀಕ್ಷೆಯಿದೆ.
ಇದನ್ನೂ ಓದಿ : ಬಿಜೆಪಿ ಮುಖಂಡನಿಗೆ ನೀಡಲಾಗಿದ್ದ ಸಚಿವ ಸಂಪುಟ ಸ್ಥಾನಮಾನ ಹಿಂಪಡೆದ ಸರ್ಕಾರ



















